ಅಪ್ರಾಪ್ತ ಸಂತ್ರಸ್ತ ಮಗುವಿನ ಗುರುತು ಬಹಿರಂಗ: ಪತ್ರಕರ್ತ, ಸಂಪಾದಕರ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್!

0
Screenshot_20260720_122610

ಬೆಂಗಳೂರು: ಅಪ್ರಾಪ್ತ ಸಂತ್ರಸ್ತ ಮಗುವಿನ ಗುರುತನ್ನು ಪತ್ರಿಕೆಯಲ್ಲಿ ಬಹಿರಂಗಪಡಿಸಿದ ಆರೋಪ ಎದುರಿಸುತ್ತಿದ್ದ ಪತ್ರಕರ್ತ ಮತ್ತು ಪತ್ರಿಕೆಯ ಸಂಪಾದಕರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

​ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015ರ ಸೆಕ್ಷನ್ 74(1)ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್‌ನ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠವು ಈ ಪ್ರಮುಖ ಆದೇಶವನ್ನು ಹೊರಡಿಸಿದೆ.

​ಕಾನೂನಿನ ಸಂಘರ್ಷಕ್ಕೆ ಒಳಗಾದ ಮಗು, ಸಂತ್ರಸ್ತ ಮಗು ಅಥವಾ ಸಾಕ್ಷಿ ಮಗುವಾಗಿದ್ದರೂ ಸಹ, ಯಾವುದೇ ಕಾರಣಕ್ಕೂ ಮಗುವಿನ ಹೆಸರು ಅಥವಾ ಶಾಲೆಯ ವಿವರಗಳನ್ನು ಪ್ರಕಟಿಸುವುದನ್ನು ಕಾಯ್ದೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

​ಪ್ರಕರಣದ ಹಿನ್ನೆಲೆ ಏನು?

  • ಘಟನೆ: ೨೦೨೦ರ ಜನವರಿಯಲ್ಲಿ ದಾಂಡೇಲಿಯ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಹೂಡಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ದಿನಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.
  • ಆರೋಪ: ಈ ಸುದ್ದಿಯಲ್ಲಿ ಸಂತ್ರಸ್ತ ಮಗುವಿನ ಗುರುತು ಬಹಿರಂಗಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವರದಿಗಾರ ಮತ್ತು ಸಂಪಾದಕರ ವಿರುದ್ಧ ಎಫ್‌ಐಆರ್ ದಾಖಲಾಗಿ, ತನಿಖೆ ಪೂರ್ಣಗೊಂಡಿತ್ತು.
  • ನ್ಯಾಯಾಲಯಕ್ಕೆ ಅರ್ಜಿ: ದಾಂಡೇಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಇರುವ ಈ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಮಾಧ್ಯಮ ಸಿಬ್ಬಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.

​’ಮಗುವಿಗೆ ನ್ಯಾಯ ಕೊಡಿಸಲು ಸುದ್ದಿ ಪ್ರಕಟಿಸಿದ್ದೆವು’ – ಪತ್ರಿಕೆಯ ವಾದ

​ನ್ಯಾಯಾಲಯದಲ್ಲಿ ಅರ್ಜಿದಾರರು ವಾದ ಮಂಡಿಸಿ, “ನಾವು ಮಗುವಿನ ಮಾನಹಾನಿ ಮಾಡುವ ಉದ್ದೇಶದಿಂದ ಈ ವರದಿ ಪ್ರಕಟಿಸಿಲ್ಲ. ಬದಲಿಗೆ ಮಗುವಿಗೆ ನ್ಯಾಯ ಕೊಡಿಸುವ ಒಳ್ಳೆಯ ಉದ್ದೇಶದಿಂದ ಮಾತ್ರ ಸುದ್ದಿ ಪ್ರಕಟಿಸಿದ್ದೇವೆ” ಎಂದು ಸಮರ್ಥಿಸಿಕೊಂಡಿದ್ದರು.

​ಪತ್ರಿಕೆಯ ವಾದ ತಿರಸ್ಕರಿಸಿದ ಹೈಕೋರ್ಟ್!

​ಪತ್ರಿಕಾ ಸಿಬ್ಬಂದಿಯ ವಾದವನ್ನು ಸಾರಾಸಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:

  • ಉದ್ದೇಶ ಏನೇ ಇರಲಿ, ನಿಷೇಧ ಕಡ್ಡಾಯ: ಬಾಲ ನ್ಯಾಯ ಕಾಯ್ದೆ ೨೦೧೫ರ ಉದ್ದೇಶ ಮತ್ತು ಶಾಸಕಾಂಗದ ಆಶಯವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, “ಮಗುವಿನ ಹಿತದೃಷ್ಟಿಯಿಂದ ಸುದ್ದಿ ಪ್ರಕಟಿಸಿದ್ದೇವೆ” ಎಂಬ ಸಮರ್ಥನೆಯನ್ನು ಪ್ರತಿಪಾದಿಸಲು ಸಾಧ್ಯವಿಲ್ಲ.
  • ಮಾನಸಿಕ ಪರಿಣಾಮ: ಮಕ್ಕಳು ಅತ್ಯಂತ ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಅವರು ಸಂತ್ರಸ್ತರಾಗಿದ್ದರೂ ಸಹ ಅವರ ಹೆಸರು ಮತ್ತು ಘಟನೆಯನ್ನು ಮಾಧ್ಯಮಗಳಲ್ಲಿ ವಿಪರೀತ ಪ್ರಚಾರ ಮಾಡುವುದು ಅವರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಪ್ರಚಾರಕ್ಕೆ ಮಗು ಸ್ಪಂದಿಸುವ ರೀತಿ ಅದರ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
  • ಮಕ್ಕಳ ಸ್ನೇಹಿ ವಿಧಾನ: ಈ ಕಾಯ್ದೆಯು ಸಂತ್ರಸ್ತ ಅಥವಾ ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಸೂಕ್ತ ಆರೈಕೆ, ರಕ್ಷಣೆ ಮತ್ತು ಸಾಮಾಜಿಕ ಮರುಸೇರ್ಪಡೆ ಒದಗಿಸುವ ಉದ್ದೇಶವನ್ನು ಹೊಂದಿದೆ.
  • ​ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ ೭೪(೧)ರ ಪ್ರಕಾರ, ಯಾವುದೇ ಪತ್ರಿಕೆ, ನಿಯತಕಾಲಿಕೆ, ಆಡಿಯೋ-ವಿಶುವಲ್ ಮಾಧ್ಯಮ ಅಥವಾ ಇತರ ಸಂವಹನ ಮಾಧ್ಯಮಗಳಲ್ಲಿ ಸಂತ್ರಸ್ತ, ಸಾಕ್ಷಿ ಅಥವಾ ಕಾನೂನಿನ ಸಂಘರ್ಷದಲ್ಲಿರುವ ಮಗುವಿನ ಹೆಸರು, ವಿಳಾಸ, ಶಾಲೆ ಅಥವಾ ಮಗುವಿನ ಗುರುತನ್ನು ಬಹಿರಂಗಪಡಿಸುವ ಯಾವುದೇ ವಿವರಗಳನ್ನು ಅಥವಾ ಫೋಟೋವನ್ನು ಪ್ರಕಟಿಸುವಂತಿಲ್ಲ.
  • ಶಿಕ್ಷೆಯ ಪ್ರಮಾಣ: ಈ ನಿಯಮವನ್ನು ಉಲ್ಲಂಘಿಸಿದರೆ ೬ ತಿಂಗಳವರೆಗೆ ಜೈಲು ಶಿಕ್ಷೆ, ೨ ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

Leave a Reply

Your email address will not be published. Required fields are marked *