ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಲಿದೆ: ಶಾಸಕ ಭೀಮಣ್ಣ ನಾಯ್ಕ
ಸಿದ್ದಾಪುರ: ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಲಿದೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಶುಕ್ರವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಉತ್ತರ ಕನ್ನಡ ಜಿಲ್ಲೆಯ ಜನಜೀವನದ ಮೇಲೆ ತುಂಬಾ ಪರಿಣಾಮ ಬೀರಲಿದೆ. ಇಲ್ಲಿಯ ಕೃಷಿ, ತೋಟಗಾರಿಕೆ ಸೇರಿದಂತೆ ರೈತಾಪಿ ವರ್ಗದ ಕೃಷಿ ಚಟುವಟಿಕೆ ಸಂಪೂರ್ಣ ಕುಂಠಿತಗೊಳ್ಳಲಿದೆ. ಜನಜೀವನಕ್ಕೆ ಮಾರಕವಾಗಿರುವ ಈ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ತಿರಸ್ಕರಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಈಗಾಗಲೇ ನಮ್ಮ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ನಾನು ಹಿಂದಿನ ಅಧಿವೇಶನದಲ್ಲೆ ವಿರೋಧಿಸಿದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಜಾರಿಗೊಳಿಸಲ್ಲ ಎಂದು ತಿಳಿಸಿದ್ದರು. ಇದೀಗ ಜಿಲ್ಲೆಯ ಎಲ್ಲಾ ಶಾಸಕರು, ಸಾಗರ ಶಾಸಕರು ಹಾಗೂ ಈ ವರದಿ ಪರಿಣಾಮ ಬೀರಲಿರುವ ಎಲ್ಲಾ ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಜತೆ ಸುಧೀರ್ಘವಾಗಿ ಚರ್ಚಿಸಿ ಸಾಧಕ-ಬಾಧಕಗಳನ್ನು ಮನವರಿಕೆ ಮಾಡಿದ್ದು, ಇದನ್ನು ಸಂಪೂರ್ಣ ತಿರಸ್ಕರಿಸುವುದಾಗಿ ತಿಳಿಸಿದಲ್ಲದೇ ಈಗಾಗಲೇ ಅಧಿಕಾರಿಗಳಿಗೂ ಸಹ ಸೂಚನೆ ನೀಡಿದ್ದಾರೆ ಎಂದರು.
ಉತ್ತರ ಕನ್ನಡ ಜಿಲ್ಲೆ ಕೈಗಾ, ಸೀಬರ್ಡ್, ವಿದ್ಯುತ್‌ಗಾಗಿ ಸಾಕಷ್ಟು ಭೂಮಿ ತ್ಯಾಗ ಮಾಡಿದೆ. ಇದರ ಮಧ್ಯೆ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿದರೆ ಇಲ್ಲಿಯ ಜನ ಮನೆಯಿಂದ ಆಚೆಗೆ ಕಾಲಿಡುವುದು ಕಷ್ಟವಾಗಲಿದೆ. ಇದರ ವಿರುದ್ಧ ಪಕ್ಷಬೇಧವಿಲ್ಲದೇ ಎಲ್ಲಾ ಶಾಸಕರು ಸಹ ವಿರೋಧಿಸಿದ್ದೇವೆ. ಯಾವುದೇ ಕಾರಣಕ್ಕೂ ಜಾರಿಗೊಳಿಸಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿದ್ದು, ಯಾರೂ ಕೂಡ ಜನರಿಗೆ ಆತಂಕ ಮೂಡಿಸಬಾರದು ಎಂದ ಅವರು, ಕೇಂದ್ರ ಸರ್ಕಾರ ಜಿಲ್ಲೆಯ ವಾಸ್ತವ ಸ್ಥಿತಿಗತಿ ಅಧ್ಯಯನ ಮಾಡಿ ಸ್ಥಳೀಯರ ಅಭಿಪ್ರಾಯ ಪಡೆಯದೇ ವರದಿ ಜಾರಿಗೆ ಮುಂದಾಗುತ್ತಿರುವುದು ಸರಿಯಲ್ಲ ಎಂದರು.
