ಅಂಕೋಲಾ–ಹುಬ್ಬಳ್ಳಿ ರೈಲು ಯೋಜನೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟ- ರೈಲು ಹಳಿ ಹಾದುಹೋಗಲಿರೋ ಜಿಲ್ಲೆಯ 40 ಗ್ರಾಮಗಳು ಯಾವ್ಯಾವವು ಗೊತ್ತಾ?

0
WhatsApp Image 2026-08-10 at 21.49.56

ಶಿರಸಿ: ಉತ್ತರ ಕರ್ನಾಟಕವನ್ನು ಕರಾವಳಿಗೆ ನೇರವಾಗಿ ಜೋಡಿಸುವ ಬಹುಕಾಲದ ಕನಸು, ಉತ್ತರ ಕನ್ನಡ ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿರುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಯೋಜನೆ ಮಹತ್ವದ ಹಂತವನ್ನು ತಲುಪಿದ್ದು, ಈ ಯೋಜನೆ ಸಾಕಾರವಾಗುವ ದಿನ ಸನ್ನಿಹಿತವಾಗಿದೆ.
ಹೌದು… ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ ಹಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಯೋಜನೆಗೆ ಮತ್ತೆ ಹೊಸ ಚಾಲನೆ ಸಿಕ್ಕಂತಾಗಿದೆ.


ಗೆಜೆಟ್ ಅಧಿಸೂಚನೆಯ ಪ್ರಕಾರ, ಯಲ್ಲಾಪುರ ಮತ್ತು ಅಂಕೋಲಾ ತಾಲೂಕುಗಳ ಸುಮಾರು 40 ಗ್ರಾಮಗಳ ವ್ಯಾಪ್ತಿಯಲ್ಲಿ ರೈಲು ಮಾರ್ಗ ಹಾದುಹೋಗಲಿದೆ. ಯಲ್ಲಾಪುರ ಭಾಗದಲ್ಲಿ ಹೊಸಳ್ಳಿ, ಕಿರವತ್ತಿ, ಕೊಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಹಿತ್ಲಕಾರಗದ್ದೆ, ಇಡಗುಂದಿ, ಅರಬೈಲ್, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಗುಳ್ಳಾಪುರ, ಕೊಡ್ಲಗದ್ದೆ, ಕಳಚೆ ಮತ್ತು ಮಾವಿನಮನೆ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಮಾರ್ಗ ಹಾದುಹೋಗಲಿದೆ.


ಇನ್ನು ಅಂಕೋಲಾ ತಾಲೂಕಿನಲ್ಲಿ ಸುಂಕಸಾಳ, ಹೆಬ್ಬುಳ, ಅಗಸೂರು, ಬೊಗ್ರಿಬೈಲ, ಅಲಗೇರಿ, ಶಿರಾಲಿ, ಬಾಳೆಗುಳಿ, ಕೆದಗೆಮನೆ, ಹೊಸಗದ್ದೆ, ಬೋಲೆ ಸೇರಿದಂತೆ ಹಲವು ಗ್ರಾಮಗಳ ಮೂಲಕ ರೈಲು ಮಾರ್ಗ ಸಾಗಲಿದೆ ಎನ್ನಲಾಗುತ್ತಿದೆ.
ಹುಬ್ಬಳ್ಳಿಯಿಂದ ಅಂಕೋಲಾವರೆಗೆ ಸಂಪರ್ಕ ಕಲ್ಪಿಸುವ ಸುಮಾರು 163 ಕಿಲೋಮೀಟರ್ ಉದ್ದದ ರೈಲು ಮಾರ್ಗ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ನಡುವಿನ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿದೆ. ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರಗಳನ್ನು ಕಾರವಾರ ಹಾಗೂ ಬೀಲೆಕೇರಿ ಬಂದರುಗಳೊಂದಿಗೆ ನೇರವಾಗಿ ಸಂಪರ್ಕಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಕಲ್ಲಿದ್ದಲು, ಕಬ್ಬಿಣದ ಅದಿರು, ಇಂಧನ, ಕೃಷಿ ಉತ್ಪನ್ನ ಸೇರಿದಂತೆ ವಿವಿಧ ಸರಕುಗಳ ಸಾಗಣೆ ಸುಲಭವಾಗಲಿದೆ.

ಇನ್ನು ಇದರಿಂದ ಪ್ರವಾಸೋದ್ಯಮಕ್ಕೂ ಬೂಸ್ಟ್ ಸಿಗಲಿದೆ. ಮಲೆನಾಡಿನ ಹಸಿರು ಸೌಂದರ್ಯದಿಂದ ಹಿಡಿದು ಉತ್ತರ ಕನ್ನಡದ ಕರಾವಳಿಯ ನಯನಮನೋಹರ ತಾಣಗಳವರೆಗೆ ಪ್ರವಾಸಿಗರಿಗೆ ಸುಲಭ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ.

ಇನ್ನೊಂದೆಡೆ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಮೂಲಕ ಈ ರೈಲು ಮಾರ್ಗ ಹಾದುಹೋಗುವುದರಿಂದ ಪರಿಸರ ಸಂರಕ್ಷಣೆಯ ಪ್ರಶ್ನೆಯೂ ಎದ್ದಿದೆ. ವರದಿಗಳ ಪ್ರಕಾರ, ಯೋಜನೆಗಾಗಿ 1.73 ಲಕ್ಷಕ್ಕೂ ಅಧಿಕ ಮರಗಳಿಗೆ ಕೊಡಲಿ ಏಟು ಬೀಳುವ ಆತಂಕ ವ್ಯಕ್ತವಾಗಿದೆ. ಕಾಳಿನದಿ, ಗಂಗಾವಳಿ ಸೇರಿದಂತೆ ಪ್ರಮುಖ ನದಿಗಳ ಜಲಾನಯನ ಪ್ರದೇಶಗಳ ಮೇಲೆ ಕಾಮಗಾರಿಯ ಪರಿಣಾಮ ಬೀರುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಕಾಮಗಾರಿ ನಡೆಸುವುದು, ಆನೆಗಳಂತಹ ಪ್ರಾಣಿಗಳ ಕಾರಿಡಾರ್‌ಗಳನ್ನು ರಕ್ಷಿಸುವುದು ಹಾಗೂ ಭೂಕುಸಿತದಂತಹ ಅಪಾಯಗಳನ್ನು ತಡೆಯುವುದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯನ್ನೂ ಸಮನ್ವಯಗೊಳಿಸುವುದು ಈ ಯೋಜನೆಯ ಮುಂದಿರುವ ದೊಡ್ಡ ಸವಾಲು.

ಒಟ್ಟಿನಲ್ಲಿ ಈ ಭಾಗದ ಜನರ ದಶಕಗಳ ಬೇಡಿಕೆಯಾಗಿದ್ದ ರೈಲು ಸಂಪರ್ಕದ ಕನಸಿಗೆ ಇದೀಗ ರೆಕ್ಕೆ ಬಂದಂತಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಗೆಜೆಟ್ ಅಧಿಸೂಚನೆ ಪ್ರಕಟವಾಗಿರುವುದು ಯೋಜನೆಗೆ ಹೊಸ ಭರವಸೆ ಮೂಡಿಸಿದ್ದು, ನಿರೀಕ್ಷೆಯಂತೆ ಬೇಗನೇ ಕಾಮಗಾರಿಗಳು ಆರಂಭವಾಗಲಿ ಎನ್ನುವುದೇ ಜಿಲ್ಲೆಯ ಜನರ ಆಶಯ.

Leave a Reply

Your email address will not be published. Required fields are marked *