ದಾಂಡೇಲಿ ಜಿಪ್ ಲೈನ್ ದುರಂತ; ರೆಸಾರ್ಟ್ ಮಾಲೀಕ, ಸಿಬ್ಬಂದಿ ವಿರುದ್ಧ ಕೇಸ್

0
WhatsApp Image 2026-07-21 at 11.59.32

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಾಂಡೇಲಿಯ ‘ಸ್ಟರ್ಲಿಂಗ್ ರಿವರ್ ರೆಸಾರ್ಟ್’ನಲ್ಲಿ ನಡೆದಿದ್ದ ಜಿಪ್ ಲೈನ್ ದುರಂತಕ್ಕೆ ಸಂಬಂಧಪಟ್ಟಂತೆ ರೆಸಾರ್ಟ್ ಮಾಲೀಕ ಹಾಗೂ ಇಬ್ಬರು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಘಟನೆಯ ಹಿನ್ನೆಲೆ: ಕಳೆದ ಜುಲೈ 3 ರಂದು ವಿಜಯಪುರ ನಿವಾಸಿ ಕುಬೇರ ಸುರಪುರ (40) ಎಂಬುವವರು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕುಬೇರ ಅವರು ಜಿಪ್‌ಲೈನ್‌ನಲ್ಲಿ ಸಾಗುತ್ತಿದ್ದಾಗ ಹಠಾತ್ತನೆ ಅದರ ಲಾಕ್) ಕಟ್ ಆಗಿತ್ತು. ಪರಿಣಾಮ ಅವರು ಸುಮಾರು 40 ಅಡಿ ಎತ್ತರದಿಂದ ನೇರವಾಗಿ ಕೆಳಗೆ ಬಿದ್ದಿದ್ದರು. ಈ ಭೀಕರ ದುರಂತದ ದೃಶ್ಯ ಕುಬೇರ ಅವರ ಸಹೋದರನ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿತ್ತು.


ಮಾಲೀಕ ಸೇರಿ ಮೂವರ ವಿರುದ್ಧ ಕೇಸ್: ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕುಬೇರ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೆಸಾರ್ಟ್ ಮಾಲೀಕ ಉಸ್ಮಾನ್ ವಹಾಬ್ ಹಾಗೂ ಸಿಬ್ಬಂದಿ ರಾಘವೇಂದ್ರ ಶೆಟ್ಟಿ, ಪವನ್ ಅವರ ಮೇಲೆ BNS 2023ರ ಕಲಂ 289, 125(B), ಸಹಿತ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಾಯಾಳುವಿನ ಸ್ಥಿತಿ ಗಂಭೀರ:ಕೆಳಗೆ ಬಿದ್ದ ರಭಸಕ್ಕೆ ಕುಬೇರ ಅವರ ಎರಡೂ ಕೈ ಹಾಗೂ ಕಾಲುಗಳ ಮೂಳೆಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ. ದಾಂಡೇಲಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ವಿಜಯಪುರದ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.


ಕುಟುಂಬಸ್ಥರ ಆಕ್ರೋಶ: ಸ್ಟರ್ಲಿಂಗ್ ರಿವರ್ ರೆಸಾರ್ಟ್ ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತ ನಡೆದ ಆರಂಭದಲ್ಲಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್ ಆಡಳಿತ ಮಂಡಳಿ, ಇದೀಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಾಯಾಳುವಿನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *