ರಾಷ್ಟ್ರಪತಿ ಭವನದ ‘ಎಟ್ ಹೋಂ ರಿಸೆಪ್ಷನ್’ಗೆ ಆಯ್ಕೆ: ಸಾಧಕಿ ಸುಜಾತಾ ನಾಯ್ಕ ಮನೆಗೆ ತೆರಳಿ ಶಾಸಕ ಭೀಮಣ್ಣ ನಾಯ್ಕ ಸನ್ಮಾನ
ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, 2026ರ ಆಗಸ್ಟ್ 15ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಗೌರವಾನ್ವಿತ ರಾಷ್ಟ್ರಪತಿಯವರ ‘ಎಟ್ ಹೋಂ ರಿಸೆಪ್ಷನ್’ (At Home Reception) ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಶಿರಸಿಯ ಪ್ರತಿಭೆ ಕುಮಾರಿ ಸುಜಾತಾ ಸುರೇಶ್ ನಾಯ್ಕ ಅವರ ನಿವಾಸಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ ಅವರು ಇಂದು ಭೇಟಿ ನೀಡಿ, ಅಭಿನಂದಿಸಿ ಗೌರವಿಸಿದರು.

ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಾಜಿ ರೇಂಜರ್ (2023-24) ಹಾಗೂ ಪ್ರಸ್ತುತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಯುವ ಸಮಿತಿಯ ಉಪಾಧ್ಯಕ್ಷರಾಗಿರುವ ಸುಜಾತಾ ನಾಯ್ಕ ಅವರು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಯುವ ಆಪದ್ ಮಿತ್ರ’ ತರಬೇತಿ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಈ ಸುದೀರ್ಘ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ಭವನದ ಈ ಅತ್ಯುನ್ನತ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ.
ಸುಜಾತಾ ಅವರ ಮನೆಗೆ ಭೇಟಿ ನೀಡಿ, ಅವರಿಗೆ ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಸನ್ಮಾನಿಸಿದ ಶಾಸಕ ಭೀಮಣ್ಣ ನಾಯ್ಕ ಅವರು ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿ, ನಮ್ಮ ಶಿರಸಿ ತಾಲೂಕಿನ ಹೆಮ್ಮೆಯ ಪುತ್ರಿ ಸುಜಾತಾ ನಾಯ್ಕ್ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ನಿರಂತರವಾಗಿ ನಡೆಸಿಕೊಂಡು ಬಂದ ಸಮಾಜ ಸೇವೆ ಹಾಗೂ ಯುವ ಆಪದ್ ಮಿತ್ರ ತರಬೇತಿಯ ಮೂಲಕ ನೀಡಿದ ಸೇವೆ ಅಪಾರವಾದದ್ದು. ಕುಮಾರ ಪರ್ವತ ಚಾರಣ ಶಿಬಿರ, ಬೆಳಗಾವಿಯ 29ನೇ ರಾಜ್ಯ ಜಾಂಬೋರೇಟ್, ಕಾರವಾರದ ಅಣು ವಿಕಿರಣ ತರಬೇತಿ, ಶಿರಸಿ ಹಾಗೂ ಮುಂಡಗೋಡಿನ ಶ್ರೀ ಮಾರಿಕಾಂಬಾ ಜಾತ್ರಾ ಸೇವಾ ಶಿಬಿರಗಳಲ್ಲಿ ಸ್ವಯಂಸೇವಕಿಯಾಗಿ ಅವರು ಸಲ್ಲಿಸಿದ ಸೇವೆ ಪ್ರಶಂಸನೀಯ. ಇಂದು ರಾಷ್ಟ್ರಪತಿ ಭವನದ ಸನ್ಮಾನಕ್ಕೆ ಆಯ್ಕೆಯಾಗುವ ಮೂಲಕ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹಾಗೂ ಶಿರಸಿ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆ ನಮ್ಮ ಭಾಗದ ಎಲ್ಲಾ ಯುವಜನತೆಗೆ ಪ್ರೇರಣೆಯಾಗಿದ್ದು, ಇವರಿಂದ ಇನ್ನೂ ಹೆಚ್ಚಿನ ಸಮಾಜ ಸೇವೆ ನಡೆಯಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸುಜಾತಾ ನಾಯ್ಕ್ ಅವರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದು ಸಾಧಕಿಗೆ ಶುಭ ಹಾರೈಸಿದರು.
