ಶಿರಸಿಯ ಯುವ ವಿಜ್ಞಾನಿಗೆ ಸಿಗ್ತು ರಾಷ್ಟ್ರಮಟ್ಟದ ಅಪರೂಪದ ಪ್ರಶಸ್ತಿ-ಅಕ್ಷಯ್ ಮಾಶೆಳ್ಕರ್ ಆವಿಷ್ಕಾರಕ್ಕೆ ರಾಷ್ಟ್ರಪತಿಯವರಿಂದಲೇ ಮೆಚ್ಚುಗೆ

0
WhatsApp Image 2026-08-06 at 16.42.14

ಶಿರಸಿ: ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ನಮ್ಮ ಜಿಲ್ಲೆಯಲ್ಲಿ ಬಡ ಮತ್ತು ಬಡಮಧ್ಯಮ ಕುಟುಂಬಗಳೇ ಹೆಚ್ಚಿದ್ದರೂ ಪ್ರತಿಭೆಗಳಿಗೆ ಮಾತ್ರ ಕೊರತೆಯಿಲ್ಲ. ನಿನ್ನೆಯಷ್ಟೇ ನಾವು ಶಿರಸಿಯ ಯುವತಿಯೊಬ್ಬರಿಗೆ ಖುದ್ದು ರಾಷ್ಟ್ರಪತಿಯವರಿಂದಲೇ ಆಹ್ವಾನ ಬಂದಿರುವ ಬಗ್ಗೆ ವರದಿಯನ್ನ ಮಾಡಿದ್ದೆವು. ಇದೀಗ ಶಿರಸಿಯ ಮತ್ತೊಬ್ಬ ಯುವ ಪ್ರತಿಭೆಯ ಅಸಾಮಾನ್ಯ ಸಾಧನೆಗೆ ಅಪರೂಪದ ರಾಷ್ಟ್ರ ಪ್ರಶಸ್ತಿಯೊಂದು ಸಿಕ್ಕಿದ್ದು, ತನ್ನ ಆವಿಷ್ಕಾರಕ್ಕೆ ರಾಷ್ಟ್ರಪತಿಯವರಿಂದಲೇ ಶಹಬಾಷ್ ಗಿರಿ ಪಡೆಯುವ ಮೂಲಕ ಜಿಲ್ಲೆ ಮತ್ತು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಶಿರಸಿ ಮೂಲದ ಯುವ ವಿಜ್ಞಾನಿ, Experimind Labs Pvt. Ltd. ಸಂಸ್ಥೆಯ ಸಂಸ್ಥಾಪಕರಾದ ಅಕ್ಷಯ್ ಜೈವಂತ್ ಮಾಶೆಲ್ಕರ್ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯೊಂದು ದೊರಕಿದ್ದು, ರಾಷ್ಟ್ರಪತಿಯವರಿಂದ ಮೆಚ್ಚುಗೆಯೂ ಸಿಕ್ಕಿದೆ. ನೀತಿ ಆಯೋಗದ ಅಟಲ್ ಇನೋವೇಶನ್ ಮಿಷನ್ ವತಿಯಿಂದ ದೇಶದ ಕೆಲವೇ ಕೆಲವು ಸಾಧಕರಿಗೆ ನೀಡಲಾಗುವ Grassroots Innovator Recognition – 2026ರ ರಾಷ್ಟ್ರೀಯ ಗೌರವಕ್ಕೆ ಅಕ್ಷಯ್ ಮಾಶೆಳ್ಕರ್ ಪಾತ್ರರಾಗಿದ್ದು, ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಅಕ್ಷಯ್ ಅವರ ಆವಿಷ್ಕಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಮಾರು ಐದು ನಿಮಿಷಗಳ ಕಾಲ ಅಕ್ಷಯ್ ಅವರ ಸಂಶೋಧನೆ, ಆವಿಷ್ಕಾರಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಖುದ್ದಾಗಿ ಆಲಿಸಿ ಚರ್ಚೆ ನಡೆಸಿದರು.

ಶಿಕ್ಷಣ ಕ್ಷೇತ್ರದಲ್ಲಿನ ನವೀನ ಸಂಶೋಧನೆ ಹಾಗೂ ಕೊಡುಗೆಗಾಗಿ ಅಕ್ಷಯ್ ಮಾಶೆಲ್ಕರ್ ಅವರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಡಾ. ಜಿತೇಂದ್ರ ಸಿಂಗ್ ಅವರು “Innovation Flame” ಫಲಕ ನೀಡಿ ಗೌರವಿಸಿದರು. ದೇಶದ ಮೂಲೆಮೂಲೆಯಿಂದ ಆಯ್ಕೆಯಾದ ಕೇವಲ 26 ಗ್ರಾಸ್‌ರೂಟ್ಸ್ ಇನೋವೇಟರ್‌ಗಳಲ್ಲಿ ನಮ್ಮ ಶಿರಸಿಯ ಅಕ್ಷಯ್ ಕೂಡ ಒಬ್ಬರು ಎನ್ನುವುದು ನಮ್ಮ ಜಿಲ್ಲೆಯ ಹೆಮ್ಮೆ. ಈ ಬಗ್ಗೆ ಖುದ್ದು ಅಕ್ಷಯ್ ಮಾಶೆಳ್ಕರ್ ಅವರೇ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ. ಅಧ್ಯಯನ ನಡೆಸುತ್ತಿರುವ ಅಕ್ಷಯ್ ಮಶೆಲ್ಕರ್ ಅವರು ಶಿರಸಿಯ ನಿವೃತ್ತ ಶಿಕ್ಷಕಿ ಲತಾ ಭಂಡಾರಿ ಹಾಗೂ ದಿ.ಜಯವಂತ್ ಮಶೆಲ್ಕರ್ ಅವರ ಪುತ್ರರಾಗಿದ್ದಾರೆ.ಅವರು ಅಭಿವೃದ್ಧಿಪಡಿಸಿರುವ *Geomagic’ ಗಣಿತ ಶಿಕ್ಷಣ ಸಂಶೋಧನೆಗೆ ನಾಲ್ಕು ಪೇಟೆಂಟ್‌ಗಳು ಲಭಿಸಿವೆ.

ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳಲ್ಲಿ AI ಆಧಾರಿತ STEM ಪ್ರಯೋಗಾಲಯಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ತಲುಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್ ಹಾಗೂ ಇತರೆ ಆಧುನಿಕ ವಿಷಯಗಳು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೂ ತಲುಪಬೇಕು ಎನ್ನುವುದು ಅವರ ಕನಸು. ಈ ನಿಟ್ಟಿನಲ್ಲಿ ಅವರು ಹಲವು ಸರ್ಕಾರಿ ಹಾಗೂ ಗ್ರಾಮೀಣ ಶಾಲೆಗಳಲ್ಲಿ AI ಪ್ರಯೋಗಾಲಯಗಳ ಸ್ಥಾಪನೆಗೆ ಮತ್ತು ವಿಜ್ಞಾನ-ತಂತ್ರಜ್ಞಾನ ಆಧಾರಿತ ಶಿಕ್ಷಣದ ವಿಸ್ತರಣೆಗೆ ಶ್ರಮಿಸುತ್ತಿದ್ದು, ಅವರ ಈ ಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಇವರ ಸಾಧನೆಗೆ ಶಾಸಕರು, ಸಂಸದರು ಸೇರಿದಂತೆ ಸಾಕಷ್ಟು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಇವರ ಈ ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ ಕತೆಯಾಗಿದೆ.

Leave a Reply

Your email address will not be published. Required fields are marked *