ಕ್ರಿಕೆಟ್ ಕಾಶಿಯಲ್ಲಿ ರೋಹಿತ್ ಶತಕ ಸಂಭ್ರಮ-ನಿವೃತ್ತಿ ಗಾಸಿಪ್ ಗೆ ಬೀಳುತ್ತಾ ಬ್ರೇಕ್?
LONDON, ENGLAND - JULY 19: Rohit Sharma of India hits out during the 3rd Metro Bank ODI between England and India at Lord's Cricket Ground on July 19, 2026 in London, England. (Photo by Alex Davidson/Getty Images)
ಲಾರ್ಡ್ಸ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Cricket Ground) ಇತಿಹಾಸ ನಿರ್ಮಾಣವಾಗಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma) ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಏಕದಿನ ಅಂತರರಾಷ್ಟ್ರೀಯ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಕೇವಲ 84 ಎಸೆತಗಳಲ್ಲಿ ರೋಹಿತ್ ಸೆಂಚುರಿ (Century) ಬಾರಿಸಿದ್ದಾರೆ.
ಇಂಗ್ಲೆಂಡ್ ಎದುರಿನ ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲವಾಗಿದ್ದ ರೋಹಿತ್ ಶರ್ಮಾ, ನಿರ್ಣಾಯಕ ಏಕದಿನ ಪಂದ್ಯದಲ್ಲಿ ಸಮಯೋಚಿತ ಶತಕ ಸಿಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಅನಾವರಣ ಮಾಡಿದ್ದರು. 84 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ, ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ವೃತ್ತಿಜೀವನದ 34ನೇ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು.
ಎದ್ದುನಿಂತು ಚಪ್ಪಾಳೆ ತಟ್ಟಿದ ಕೋಚ್ ಗೌತಮ್ ಗಂಭೀರ್
ಇನ್ನು ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದಂತೆಯೇ ಲಾರ್ಡ್ಸ್ ಬಾಲ್ಕನಿಯಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದ ಹೆಡ್ ಕೋಚ್ ಗೌತಮ್ ಗಂಭೀರ್ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹಿಟ್‌ಮ್ಯಾನ್ ಆಟವನ್ನು ಸಂಭ್ರಮಿಸಿದರು. ರೋಹಿತ್ ಶರ್ಮಾ ಹಾಗೂ ಗೌತಮ್ ಗಂಭೀರ್ ನಡುವಿನ ಸಂಬಂಧ ಹದಗೆಟ್ಟಿದೆ. ರೋಹಿತ್ ನಿವೃತ್ತಿ ಪಡೆಯಲು ಗಂಭೀರ್ ಒತ್ತಡ ಹೇರುತ್ತಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಇದೀಗ ತೆರೆ ಬಿದ್ದಿದೆ.
ನಿವೃತ್ತಿ ಗಾಸಿಪ್‌ಗೆ ಬೀಳುತ್ತಾ ಬ್ರೇಕ್?
2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ ಅವರಿಗೆ ಲಾರ್ಡ್ಸ್ ಪಂದ್ಯವೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎನ್ನುವಂತಹ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಆದರೆ ಇದೀಗ ಲಾರ್ಡ್ಸ್ ಮೈದಾನದಲ್ಲೇ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಎಲ್ಲಾ ಗಾಸಿಪ್‌ಗೆ ಬ್ರೇಕ್ ಹಾಕುವ ಕೆಲಸ ಮಾಡಿದ್ದಾರೆ.
