ಜಿಲ್ಲೆಯಲ್ಲಿ ಡ್ರಗ್ ಪೆಡ್ಲರ್ಸ್ ನಿದ್ದೆಗೆಡಿಸಿದ ರಿಯಲ್ ಸಿಂಗಂ-ಯಾರು ಈ ಸೂಪರ್ ಹೀರೋ ಸುಪಾ?

0
WhatsApp Image 2026-07-18 at 17.56.14

ಶಿರಸಿ ನ್ಯೂಸ್ ವಿಶೇಷ ವರದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ವ್ಯಾಪಕವಾಗಿ ಹರಡುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಈ ಜಾಲ ಕೆಲಸ ಮಾಡುತ್ತಿದೆ. ಯುವ ಪೀಳಿಗೆಯನ್ನು ಬಲಿಪಡೆಯುತ್ತಿರುವ ಈ ಡ್ರಗ್ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಸಂಪೂರ್ಣವಾಗಿ ಸನ್ನದ್ಧವಾಗಿದ್ದು, ರಿಯಲ್ ಸಿಂಗಂನನ್ನು ಫೀಲ್ಡ್ ಗಿಳಿಸಿ ಕಾರ್ಯಾಚರಣೆ ಶುರುಮಾಡಿದೆ.
ಖದೀಮರು ಮಾದಕ ವಸ್ತುಗಳನ್ನು ಸಾಗಿಸಲು ನಾನಾ ರೀತಿಯ ಹೈಟೆಕ್ ಮಾರ್ಗಗಳನ್ನು ಹುಡುಕುತ್ತಿದ್ದರೆ, ಇತ್ತ ಪೊಲೀಸರು ಅವರ ಜಾಲವನ್ನು ಮಟ್ಟಹಾಕಲು ತಮ್ಮದೇ ಆದ ದಾರಿ ಹುಡುಕಿಕೊಂಡಿದೆ. ಜಿಲ್ಲಾ ಶ್ವಾನದಳದ ಹೆಮ್ಮೆಯ ಶ್ವಾನ, ಸೂಪರ್ ಹೀರೋ ಸುಪಾನ ಹವಾ ಜಿಲ್ಲೆಯಲ್ಲಿ ಶುರುವಾಗಿದ್ದು, ಡ್ರಗ್ ಪೆಡ್ಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಈ ಸುಪಾ ಕೇವಲ ಸಾಮಾನ್ಯ ಶ್ವಾನವಲ್ಲ, ಇವನು ಕರಾವಳಿ ಪೊಲೀಸರ ಪಾಲಿನ ರಿಯಲ್ ಹೀರೋ. ಬೆಲ್ಜಿಯನ್ ಮಲಿನೋಯಿಸ್ ತಳಿಯ ಈ ಧೀರ ಸುಪಾ ಅತ್ಯಂತ ಕಠಿಣ ತರಬೇತಿ ಪಡೆದಿದ್ದಾನೆ. ಅದೆಂತದ್ದೇ ದುರ್ಗಮ ಹಾದಿಯಾಗಲಿ, ಅಡೆತಡೆಗಳಾಗಲಿ ಗಾಳಿಯ ವೇಗದಲ್ಲಿ ನುಗ್ಗಿ ಮುನ್ನುಗ್ಗಬಲ್ಲ ಚಾಣಾಕ್ಷ. ಕಣ್ಣು ಮಿಟುಕಿಸುವುದರೊಳಗೆ ಎಂಥದ್ದೇ ಕಠಿಣ ಟಾಸ್ಕ್ ಅನ್ನು ಮುಗಿಸುವ ಇವನ ಚುರುಕುತನ ನಿಜಕ್ಕೂ ಬೆರಗು ಮೂಡಿಸುವಂತದ್ದು.

ಡ್ರಗ್ ಪೆಡ್ಲರ್‌ಗಳು ಪೊಲೀಸರ ಕಣ್ಣು ತಪ್ಪಿಸಲು ಕೊರಿಯರ್ ಸರ್ವೀಸ್, ಪಾರ್ಸೆಲ್ ಹಾಗೂ ಬಸ್ಸುಗಳ ಮೂಲಕ ಮಾದಕ ವಸ್ತುಗಳನ್ನು ಸಾಗಿಸಲು ಹೊಸ ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇವರ ಎಲ್ಲಾ ಪ್ಲಾನ್‌ಗಳನ್ನು ಈ ಸುಪಾ ಉಲ್ಟಾ ಮಾಡುತ್ತಿದ್ದಾನೆ. ಬಸ್ ನಿಲ್ದಾಣದಲ್ಲಿ ಕುಳಿತಿರುವ ಪ್ರಯಾಣಿಕರ ಬ್ಯಾಗ್‌ಗಳಾಗಿರಲಿ ಅಥವಾ ಕೊರಿಯರ್ ಅಂಗಡಿಗಳಿಗೆ ಬರುವ ನೂರಾರು ಬಾಕ್ಸ್‌ಗಳಾಗಿರಲಿ, ಸುಪಾ ಮೂಗಿಗೆ ಒಮ್ಮೆ ಡ್ರಗ್ಸ್ ವಾಸನೆ ಬಡಿದರೆ ಸಾಕು, ಅಲ್ಲಿಗೆ ಆ ಖದೀಮರ ಕಥೆ ಮುಗಿದಂತೆಯೇ!

ಅಷ್ಟೇ ಯಾಕೆ, ಅನುಮಾನಾಸ್ಪದ ವಾಹನಗಳು, ಕಾರಿನ ಸೀಟುಗಳ ಅಡಿಭಾಗ, ಅಂಚೆ ಕಚೇರಿಯ ಪತ್ರಗಳು ಹಾಗೂ ದೊಡ್ಡ ದೊಡ್ಡ ಸರಕು ಸಾಗಣೆ ಲಾರಿಗಳ ಕಂಟೈನರ್ ಒಳಗೆ ಅಡಗಿಸಿಟ್ಟಿರುವ ಮಾದಕ ದ್ರವ್ಯಗಳನ್ನು ಕೂಡ ಸುಪಾ ತನ್ನ ಅದ್ಭುತ ಪತ್ತೇದಾರಿ ಶಕ್ತಿಯಿಂದ ಕ್ಷಣಾರ್ಧದಲ್ಲಿ ಪತ್ತೆ ಹಚ್ಚುತ್ತಿದ್ದಾನೆ.
ಇದೀಗ ಹಗಲು ರಾತ್ರಿ ಎನ್ನದೆ ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸುಪಾ ಆಪರೇಷನ್ ಚುರುಕುಗೊಂಡಿದೆ. ಕಾನೂನು ಬಾಹಿರವಾಗಿ ಯುವ ಜನತೆಯ ಬದುಕಿನ ಜೊತೆ ಚೆಲ್ಲಾಟವಾಡುವ ಡ್ರಗ್ಸ್ ದಂಧೆಕೋರರಿಗೆ ಉತ್ತರ ಕನ್ನಡ ಪೊಲೀಸರು ಮತ್ತು ಸುಪಾ ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಮೂಲಕ ನಾವು ನಿಮ್ಮ ಬೆನ್ನು ಬಿದ್ದಿದ್ದೇವೆ. ಯಾವುದೇ ಕಾರಣಕ್ಕೂ ನಿಮ್ಮನ್ನು ಹಿಡಿಯದೆ ಬಿಡುವುದಿಲ್ಲ ಎನ್ನುವ ನೇರ ಸಂದೇಶ ರವಾನಿಸಿದ್ದಾರೆ.

ಇನ್ನೊಂದು ಕಡೆ ಈ ರಿಯಲ್ ಹೀರೊ ಸುಪಾ ಅಕ್ಷನ್ ಮತ್ತು ಖದರ್ ನೋಡಿ ಜಿಲ್ಲೆಯ ಜನರೂ ಸಹ ಮೆಚ್ಚಿಕೊಂಡಿದ್ದಾರೆ. ವಾವ್ ಸಿಂಗಂ ವಾವ್ ಎಂದು ಹೊಗಳುತ್ತಿದ್ದಾರೆ.

Leave a Reply

Your email address will not be published. Required fields are marked *