ಕಸ್ತೂರಿ ರಂಗನ್ ವರದಿ ಜಾರಿಗೆ ಶಾಸಕ ಭೀಮಣ್ಣ ನಾಯ್ಕ ತೀವ್ರ ವಿರೋಧ: ವರದಿ ಕೈಬಿಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಅಭಯ

0
IMG-20260820-WA0046

ಶಿರಸಿ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಸಿದ್ಧಪಡಿಸಲಾಗಿರುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಆಗ್ರಹಿಸಿ ಶಿರಸಿ-ಸಿದ್ದಾಪುರ ಕ್ಷೇತ್ರದ ಮಾನ್ಯ ಶಾಸಕರಾದ ಭೀಮಣ್ಣ ನಾಯ್ಕ ಅವರು ಇಂದು ಅರಣ್ಯ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಶಾಸಕರ ಭೇಟಿ ಹಾಗೂ ವಿಷಯದ ತೀವ್ರತೆಯನ್ನು ಪರಿಗಣಿಸಿದ ಸಚಿವರು, ಮಲೆನಾಡು ಭಾಗದ ಜನರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವುದಾಗಿ ಸ್ಪಷ್ಟ ಭರವಸೆ ನೀಡಿದ್ದಾರೆ.

ಮನವಿ ಸಲ್ಲಿಕೆ ವೇಳೆ ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತು ಶಿರಸಿ-ಸಿದ್ದಾಪುರ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಜನಸಾಮಾನ್ಯರು, ರೈತರು ಅನುಭವಿಸಬೇಕಾಗುವ ಗಂಭೀರ ಸಂಕಷ್ಟಗಳನ್ನು ಶಾಸಕ ಭೀಮಣ್ಣ ನಾಯ್ಕ ಅವರು ಸಚಿವರಿಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು.

ವರದಿಯಿಂದ ಜನರಿಗಾಗುವ ತೊಂದರೆಗಳ ಕುರಿತು ಶಾಸಕರು ಈ ಕೆಳಗಿನ ವಿಷಯಗಳನ್ನು ಮಂತ್ರಿಗಳಿಗೆ ಮನವಿಯಲ್ಲಿ ತಿಳಿಸಿದ್ದಾರೆ : •ಇಕೋ ಸೆನ್ಸಿಟೀವ್ ಏರಿಯಾ (ESA) ವ್ಯಾಪ್ತಿ: ಪಶ್ಚಿಮ ಘಟ್ಟದ 59,949 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಇಕೋ ಸೆನ್ಸಿಟೀವ್ ಏರಿಯಾ (ಎ.ಎಸ್.ಎ.) ಗೆ ಒಳಪಡಿಸಿ ನಿರ್ಬಂಧ ವಿಧಿಸಲಾಗಿದೆ.

•ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳು: ಈ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯ ಒಟ್ಟು 604 ಹಳ್ಳಿಗಳು ಒಳಪಟ್ಟಿದ್ದು, ಇದರಲ್ಲಿ ಶಿರಸಿ ತಾಲೂಕಿನ 125 ಹಾಗೂ ಸಿದ್ದಾಪುರ ತಾಲೂಕಿನ 103 ಹಳ್ಳಿಗಳು ಸೇರಿವೆ.

•ಸಂಪೂರ್ಣ ನಿಷೇಧಿತ ಚಟುವಟಿಕೆಗಳು: ಕಸ್ತೂರಿರಂಗನ್ ವರದಿ ಪ್ರಕಾರ ನಿರ್ಬಂಧಿತ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್ ಹಾಗೂ ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

•ಕಟ್ಟಡ ನಿರ್ಮಾಣದ ನಿಯಮ: 20,000 ಚದರ ಮೀಟರ್‌ಗಿಂತ ದೊಡ್ಡದಾದ ಕಟ್ಟಡವನ್ನು ನಿರ್ಮಾಣ ಮಾಡುವಂತಿಲ್ಲ.

•ಜನರ ಮೇಲಾಗುವ ವ್ಯತಿರಿಕ್ತ ಪರಿಣಾಮ: ಈ ವರದಿಯು ಅನುಷ್ಠಾನಗೊಂಡರೆ ಅರಣ್ಯವಾಸಿಗಳು, ಬುಡಕಟ್ಟು ಜನಾಂಗದವರು, ಜಿಲ್ಲೆಯ ಹಾಗೂ ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ.

•ಸ್ಥಳೀಯರ ಅಭಿಪ್ರಾಯದ ಕೊರತೆ: ಕಸ್ತೂರಿರಂಗನ್ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವಾಗ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸದಿರುವುದರಿಂದ, ಅರಣ್ಯ ಪ್ರದೇಶವನ್ನೇ ನಂಬಿ ಬದುಕುತ್ತಿರುವ ಜನಾಂಗದ ಬದುಕನ್ನು ಕಸಿದುಕೊಂಡಂತಾಗುತ್ತದೆ.

•ಕೇಂದ್ರ ಸರ್ಕಾರದ ನಿಯಂತ್ರಣ: ವರದಿ ಜಾರಿಯಾದಲ್ಲಿ ಗುರುತಿಸಲ್ಪಟ್ಟ ಭೂಭಾಗಗಳು ರಾಜ್ಯದ ನಿಯಂತ್ರಣದಿಂದ ಕೈತಪ್ಪಿ ನೇರವಾಗಿ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿದ್ದು, ಇದು ರಾಜ್ಯದ 10 ಜಿಲ್ಲೆಗಳ ಅಭಿವೃದ್ಧಿ ಹಾಗೂ ಪ್ರಗತಿಗೆ ಅಡ್ಡಿಯಾಗುತ್ತದೆ.

•ವರದಿಯ ನೈಜತೆಯ ಕೊರತೆ: ಈ ವರದಿಯನ್ನು ವೈಮಾನಿಕ ದತ್ತಾಂಶದ (aerial data) ಆಧಾರದ ಮೇಲೆ ತಯಾರಿಸಲಾಗಿದ್ದು, ವಾಸ್ತವಿಕ ಹಾಗೂ ನೈಜ ಚಿತ್ರಣವನ್ನು ಪರಿಗಣಿಸಿಲ್ಲ.

ಶಾಸಕ ಭೀಮಣ್ಣ ನಾಯ್ಕ ಅವರ ಸುದೀರ್ಘ ಚರ್ಚೆ ಹಾಗೂ ವಸ್ತುಸ್ಥಿತಿಯ ವಿವರಣೆಯನ್ನು ಆಲಿಸಿದ ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಕ್ಷಣವೇ ಸ್ಪಂದಿಸಿದರು. ಉತ್ತರ ಕನ್ನಡ ಜಿಲ್ಲೆಯ ಮತ್ತು ಶಿರಸಿ-ಸಿದ್ದಾಪುರ ಭಾಗದ ಜನರ ಹಿತರಕ್ಷಣೆ ನಮಗೆ ಮುಖ್ಯವಾಗಿದ್ದು, ಜನರ ಜೀವನಕ್ಕೆ ಮಾರಕವಾಗುವ ಮತ್ತು ಅಭಿವೃದ್ಧಿಗೆ ತೊಡಕಾಗುವ “ಕಸ್ತೂರಿ ರಂಗನ್ ವರದಿಯನ್ನು ಕೈಬಿಡಲಾಗುವುದು” ಎಂದು ಮಾನ್ಯ ಶಾಸಕರಿಗೆ ಖಾತ್ರಿ ನೀಡಿದರು.

ಶಾಸಕ ಭೀಮಣ್ಣ ನಾಯ್ಕ ಅವರ ನಿರಂತರ ಹೋರಾಟ ಹಾಗೂ ಸರ್ಕಾರದ ಮಟ್ಟದಲ್ಲಿ ನಡೆಸಿದ ಯಶಸ್ವಿ ಮಾತುಕತೆಯಿಂದಾಗಿ ಕಸ್ತೂರಿ ರಂಗನ್ ವರದಿ ಕೈಬಿಡುವ ಭರವಸೆ ದೊರೆತಿರುವುದು ಉತ್ತರಕನ್ನಡ ಜಿಲ್ಲೆಯ ಮತ್ತು ಶಿರಸಿ-ಸಿದ್ದಾಪುರ ಭಾಗದ ಜನರಲ್ಲಿ ಹಾಗೂ ರೈತ ಸಮುದಾಯದಲ್ಲಿ ದೊಡ್ಡ ಮಟ್ಟದ ಸಮಾಧಾನ ತಂದಿದೆ.

Leave a Reply

Your email address will not be published. Required fields are marked *