ದೇಶದ ಸೈನಿಕರಿಗೆ ಅರಣ್ಯ ಅಧಿಕಾರಿಗಳಿಂದ ಅವಮಾನ;ಘಟನೆಗಳು ಪುನರಾವರ್ತನೆಯಾಗದಿರಲಿ- ರವೀಂದ್ರ ನಾಯ್ಕ
ಸಿದ್ದಾಪುರ: ನಿವೃತ್ತ ಸೈನಿಕ ಕೃಷ್ಣ ದ್ಯಾವ ನಾಯ್ಕ ಅವರ ಅರಣ್ಯ ಸಾಗುವಳಿ ಕ್ಷೇತ್ರಕ್ಕೆ ಅರಣ್ಯ ಸಿಬ್ಬಂಧಿಯಿಂದ ಜುಲೈ 30 ರಂದು, ಒಕ್ಕಲೆಬ್ಬಿಸುವ ಪ್ರಕ್ರಿಯೆಯು ಸಮಸ್ತ ದೇಶ ಸೇವೆ ಮಾಡುವ ಸೈನಿಕರಿಗೆ ಅವಮಾನ ಮಾಡಿದಂತಾಗಿದೆ. ಇಂತಹ ಘಟನೆಗಳ ಪುನರಾವರ್ತನೆಯಿಂದ ಸರ್ಕಾರ ಮತ್ತು ಶಾಸಕರಿಗೆ ಅಗೌರವ ಸೂಚಿಸಿದಂತಾಗುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಯ ವಿರುದ್ಧ ಆಪಾದಿಸಿದರು.
ಅರಣ್ಯ ಇಲಾಖೆಯಿಂದ ನಿವೃತ್ತ ಸೈನಿಕನ ಕುಟುಂಬದ ಮೇಲೆ ಆಗಿರುವ ದೌರ್ಜನ್ಯದ ಕುರಿತು ಚರ್ಚಿಸಲು ಶುಕ್ರವಾರ ನಿಯೋಗದೊಂದಿಗೆ ತೆರಳಿ ಸಿದ್ದಾಪುರ ತಹಶೀಲ್ದಾರ ಮಂಜುಳಾ ನಾಯಕ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
ಈ ವೇಳೆ ಮಾಜಿ ಸೈನಿಕ, ಸದ್ಯ ಮಾನಸಿಕ ಅಸ್ವಸ್ಥನಾಗಿರುವ ಕೃಷ್ಣ ನಾಯ್ಕ ಅವರ ತಾಯಿ ಸೀತಾ ದ್ಯಾವ ನಾಯ್ಕ ಅವರು ತಹಶೀಲ್ದಾರ ಅವರಿಗೆ ತಮ್ಮ ಕುಟುಂಬದ ವಿರುದ್ಧ ನಡೆದ ದೌರ್ಜನ್ಯದ ಬಗ್ಗೆ ವಿವರಿಸಿ ಕಣ್ಣಿರು ಹಾಕಿದರು.

ನಿವೃತ್ತ ಸೈನಿಕನ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನು ಬಾಹಿರ ಮತ್ತು ಕಾನೂನು ವಿಧಿ ವಿಧಾನ ಅನುಸರಿಸದೇ ಬೃಹತ್ ಸಂಖ್ಯೆಯ ಪೋಲಿಸ್ ಮತ್ತು ಅರಣ್ಯ ಸಿಬ್ಬಂದಿಗಳಿಂದ ಕಾರ್ಯ ಜರುಗಿಸುವ ಕುರಿತು ತಹಶೀಲ್ದಾರ ಮಂಜುಳಾ ನಾಯಕ ಮುಂದೆ ಹೋರಾಟಗಾರರ ವೇದಿಕೆಯ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಪಿಐ ಸೀತಾರಾಮ, ಪಿಎಸ್ ಐ ನಾಗಪ್ಪ ಭೋವಿ ಚರ್ಚೆಯಲ್ಲಿ ಸೂಕ್ತ ಸಲಹೆ ಸೂಚನೆ ನೀಡಿದರು. ಹೋರಾಟಗಾರರ ವೇದಿಕೆಯ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ತಾಲೂಕಾ ಸಂಚಾಲಕ ಸಂಕೇತ ಹಲಗೇರಿ, ನಾಗಪತಿ ಗೌಡ ಹುಕ್ಕಳ್ಳಿ, ಮಂಜುನಾಥ ಮಡಿವಾಳ ಮುಟ್ಟಳ್ಳಿ, ಸೀತಾರಾಮ ಗೌಡ, ಮೋಹನ್ ಕಾನಕ್ಕಿ, ಬಿಡಿ ನಾಯ್ಕ ಕುರಗೆತೋಟ, ದಿನೇಶ ನಾಯ್ಕ ಬೇಡ್ಕಣಿ, ಕಾರ್ಲೆಸ್ ಫರ್ನಾಂಡಿಸ್ ಮಾವಿನಗುಂಡಿ, ರಾಮಚಂದ್ರ ನಾಯ್ಕ, ಹಾಜೀರಾ ಬೇಗಂ, ಅಬ್ದುಲ್ ಸುಭಾನ್ ಅರೆಂದೂರು, ವಾಸು ನಾಯ್ಕ, ತಿಮ್ಮ ತ್ಯಾರ್ಸಿ, ಅಣ್ಣಪ್ಪ ನಾಯ್ಕ ಅಕ್ಕುಂಜಿ, ಬಿ ಎನ್ ನಾಯ್ಕ, ರಾಜು ಕಿರೇಕೋಡ, ಮಂಜುನಾಥ ನಾಯ್ಕ, ಜಯವಂತ ನಾಯ್ಕ ತ್ಯಾರ್ಸಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.
ದೌಜನ್ಯ ಘಟನೆಗಳ ಕುರಿತು ವಿಚಾರಿಸಿ, ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ ಮಂಜುಳಾ ನಾಯಕ ಅವರು ನಿಯೋಗಕ್ಕೆ ಭರವಸೆ ನೀಡಿದರು.

ಶಾಸಕರಿಗೆ ತಿಳಿಸಿಲ್ಲ: ಒಕ್ಕಲೆಬ್ಬಿಸುವ ಕುರಿತು ಶಾಸಕರ ಗಮನಕ್ಕೆ ತರಲಾಗಿತ್ತಾ ಎಎಂದು ಆರ್‌ಎಫ್‌ಒ ಉಷಾ ಕಬ್ಬೆರ ಅವರನ್ನು ಪ್ರಶ್ನಿಸಿದಾಗ, ಶಾಸಕರ ಗಮನಕ್ಕೆ ತಂದಿರಲಿಲ್ಲ ಎಂಬ ಉತ್ತರವನ್ನು ನೀಡಿದರು. ಇದರಿಂದ ಅಸಮಾಧಾನಗೊಂಡ ಹೋರಾಟಗಾರರು, ಕ್ಷೇತ್ರಕ್ಕೆ ಬರುವಾಗ ಶಾಸಕರ ಗಮನಕ್ಕೆ ತರುತ್ತೀರಿ, ಬಂದ ನಂತರ ಶಾಸಕ ಮತ್ತು ಸರ್ಕಾರದ ವಿರುದ್ಧ ಕಾರ್ಯ ಮಾಡಿ, ಶಾಸಕ ಮತ್ತು ಸರ್ಕಾರದ ಹೆಸರನ್ನು ಕೆಡಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
