ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ: ಶಾಸಕ ಭೀಮಣ್ಣ ನಾಯ್ಕ
ಶಿರಸಿ: ಯುವಜನತೆಯನ್ನು ಮಾದಕ ದ್ರವ್ಯಗಳ ದುಷ್ಟ ಚಟದಿಂದ ದೂರವಿಟ್ಟು, ಸಮಾಜವನ್ನು ಡ್ರಗ್ಸ್ ಮುಕ್ತಗೊಳಿಸುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಇಲಾಖೆಗಳ ಜಂಟಿ ಜವಾಬ್ದಾರಿಯಾಗಿದೆ ಎಂದು ಶಾಸಕ ಭೀಮಣ್ಣ ಟಿ. ನಾಯ್ಕ ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಶಿರಸಿ ಉಪವಿಭಾಗದ ವತಿಯಿಂದ ನಗರದ ಎಂ.ಇ.ಎಸ್. ಕಾಮರ್ಸ್ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ‘ಡ್ರಗ್ಸ್ ವ್ಯಸನ ಮುಕ್ತ ಆಪರೇಶನ್ RISE’ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದೆ. ಮಾದಕ ದ್ರವ್ಯಗಳ ದಾಸರಾಗುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದಲ್ಲದೆ, ಕುಟುಂಬ ಹಾಗೂ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಡ್ರಗ್ಸ್ ಹಾವಳಿ ತಡೆಯಲು ಕೇವಲ ಕಾನೂನು ಕ್ರಮವಷ್ಟೇ ಸಾಲದು; ಶಾಲೆ, ಕಾಲೇಜು ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ‘ಆಪರೇಶನ್ RISE’ ಶ್ಲಾಘನೀಯ ಕಾರ್ಯಕ್ರಮವಾಗಿದೆ. ಮಕ್ಕಳು ಹಾದಿ ತಪ್ಪದಂತೆ ನೋಡಿಕೊಳ್ಳುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ದೊಡ್ಡದಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಗಮನಹರಿಸಿ, ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಅಬಕಾರಿ, ಆರೋಗ್ಯ, ಶಿಕ್ಷಣ ಹಾಗೂ ತಾಲೂಕು ಆಡಳಿತದ ಪ್ರಮುಖ ಅಧಿಕಾರಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ, ಅಬಕಾರಿ ಉಪಾಧೀಕ್ಷಕಿ ದಿವ್ಯಾ ಕೆ. ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಮಧುಕರ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜಪ್ಪ ನಾಯ್ಕ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ
ಚನ್ನಬಸಪ್ಪ ಹಾವಣಗಿ, ಎಂ.ಇ.ಎಸ್. ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ
ವಿಠ್ಠಲ್ ಆರ್. ಭಟ್ ಇದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕ ವೃಂದದವರು ಹಾಗೂ ನಗರದ ಪ್ರಮುಖ ಗಣ್ಯರು ಉಪಸ್ಥಿತರಿದ್ದು, ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಪ್ರತಿಜ್ಞೆ ಸ್ವೀಕರಿಸಿದರು.
