ತಾಳಗುಪ್ಪ-ಶಿರಸಿ ರೈಲು ಮಾರ್ಗದ ಕುರಿತು ಬಿಗ್ ಅಪ್ ಡೇಟ್- ಕೇಂದ್ರ ರೈಲ್ವೇ ಮಂತ್ರಿಯನ್ನು ಭೇಟಿಯಾದ ಕಾಗೇರಿ ಕೊಟ್ರು ಗುಡ್ ನ್ಯೂಸ್
ಶಿರಸಿ: ಅದು ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ಭಾಗದ ಜನರ ಬಹುಕಾಲದ ಕನಸು. ನಮ್ಮೂರಿಗೂ ರೈಲು ಗಾಡಿ ಬರಬೇಕು. ನಾವು ಸಹ ರೈಲಿನಲ್ಲಿ ಪ್ರಯಾಣ ಮಾಡಬೇಕು, ಬೆಂಗಳೂರಿನಂತಹ ದೂರದ ಊರುಗಳಿಗೆ ಓಡಾಡಲು ಹಾಗೂ ಹುಬ್ಬಳ್ಳಿಯಂತಹ ಊರುಗಳಿಗೆ ಸರಕು, ಸಾಗಾಟ ಮಾಡಲು ಅನುಕೂಲವಾಗಬೇಕು ಎನ್ನುವುದು ಈ ಭಾಗದ ಜನರ ದಶಕ ದಶಕಗಳ ಬೇಡಿಕೆಯಾಗಿತ್ತು. ಇದೀಗ ಮಲೆನಾಡಿನ ಸಹಸ್ರಾರು ಜನರ ಬೇಡಿಕೆಯಾಗಿದ್ದ ಹುಬ್ಬಳ್ಳಿ-ತಾಳಗುಪ್ಪ ರೈಲು ಮಾರ್ಗದ ಕುರಿತು ಬಿಗ್ ಅಪ್ ಡೇಟ್ ಸಿಕ್ಕಿದ್ದು, ಸಂಸದ ಕಾಗೇರಿ ಶಿರಸಿ-ಸಿದ್ದಾಪುರದ ಜನರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ನೂತನ ರೈಲು ಮಾರ್ಗ ಯೋಜನೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮಹತ್ವದ ಮನವಿ ಸಲ್ಲಿಸಿದ್ದಾರೆ. ಭೇಟಿಯ ವೇಳೆ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವಿಳಂಬ ಅಥವಾ ಗೊಂದಲ ಉಂಟಾಗದಂತೆ ವಿಸ್ತೃತ ಶೀಘ್ರವೇ ಯೋಜನಾ ವರದಿಯನ್ನು ಸಿದ್ಧಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ರೈಲ್ವೆ ಮಂಡಳಿಯಿಂದ ಈ ನೂತನ ರೈಲು ಮಾರ್ಗಕ್ಕೆ ಅಗತ್ಯ ಮಂಜೂರಾತಿಯನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಸಂಸದರ ಮನವಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಯೋಜನೆಯ ಕುರಿತು ಶೀಘ್ರದಲ್ಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನ ನೀಡಿರುವುದಾಗಿ ಸಂಸದ ಕಾಗೇರಿ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತಾಳಗುಪ್ಪ – ಹುಬ್ಬಳ್ಳಿ ಹೊಸ ರೈಲು ಮಾರ್ಗವು ಮಲೆನಾಡು ಮತ್ತು ಉತ್ತರ ಕರ್ನಾಟಕವನ್ನು ಬೆಸೆಯುವ ಬಹುನಿರೀಕ್ಷಿತ ರೈಲ್ವೆ ಯೋಜನೆಯಾಗಿದೆ. ಈ ರೈಲು ಮಾರ್ಗವು ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದಿಂದ ಪ್ರಾರಂಭವಾಗಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಮುಂಡಗೋಡ ಮತ್ತು ತಡಸ ಮೂಲಕ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯನ್ನು ಸಂಪರ್ಕಿಸುತ್ತದೆ. ಅಂದಾಜು 158 ರಿಂದ 165 ಕಿಲೋಮೀಟರ್‌ಗಳಷ್ಟು ಉದ್ದದ ಮಾರ್ಗ ಇದಾಗಿದೆ. ಇದರಿಂದ ಅಂದಾಜು 15 ಜಿಲ್ಲೆಗಳ ಜನರಿಗೆ ಪ್ರಯಾಣದ ಅನುಕೂಲವಾಗಲಿದೆ. ಈ ರೈಲು ಮಾರ್ಗದಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು, ಮಲೆನಾಡಿನ ಕೃಷಿ ಉತ್ಪನ್ನಗಳನ್ನು ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಾರುಕಟ್ಟೆಗಳಿಗೆ ಸುಲಭವಾಗಿ ಸಾಗಿಸಲು ಈ ಮಾರ್ಗ ನೆರವಾಗಲಿದೆ.
ಒಟ್ಟಿನಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಇದೀಗ ಜೀವ ಬರುತ್ತಿದ್ದು, ಸಂಸದ ಕಾಗೇರಿಯವರು ರೈಲ್ವೇ ಮಂತ್ರಿಯನ್ನು ಭೇಟಿ ಮಾಡಿರುವುದು ಮತ್ತಷ್ಟು ಭರವಸೆ ಮೂಡಿಸಿದೆ.
