AIBE-21 ಫಲಿತಾಂಶ ಪ್ರಕಟ:ಶೇ. 65.92 ಅಭ್ಯರ್ಥಿಗಳು ತೇರ್ಗಡೆ; ಕಟ್-ಆಫ್ ಅಂಕ 3ಕ್ಕೆ ಇಳಿಕೆ!

0
WhatsApp Image 2026-07-18 at 19.33.47

ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಶನಿವಾರ (ಜುಲೈ 18) ‘ಆಲ್ ಇಂಡಿಯಾ ಬಾರ್ ಎಕ್ಸಾಮಿನೇಷನ್-XXI’ (AIBE-21) ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು ಶೇ. 65.92 ರಷ್ಟು ಅಭ್ಯರ್ಥಿಗಳು ಅರ್ಹತೆ ಗಳಿಸುವ ಮೂಲಕ ವಕೀಲ ವೃತ್ತಿ ನಡೆಸಲು ಅರ್ಹರಾಗಿದ್ದಾರೆ ಎಂದು ಬಿಸಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು 100 ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಲೆಕ್ಕ ಹಾಕಲಾಗಿದೆ ಎಂದು ಬಾರ್ ಕೌನ್ಸಿಲ್ ಸ್ಪಷ್ಟಪಡಿಸಿದೆ.

ಕಟ್-ಆಫ್ ಅಂಕ 3ಕ್ಕೆ ಇಳಿಕೆ:​ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ಐದು ಸದಸ್ಯರ ಉಸ್ತುವಾರಿ ಸಮಿತಿಯು ಪ್ರಶ್ನೆ ಪತ್ರಿಕೆ ಮತ್ತು ಫಲಿತಾಂಶದ ಸಾರಾಂಶವನ್ನು ಪರಿಶೀಲಿಸಿದ ನಂತರ ಮಹತ್ವದ ತೀರ್ಮಾನ ಕೈಗೊಂಡಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 45 ಮತ್ತು SC/ST/PwD ಅಭ್ಯರ್ಥಿಗಳಿಗೆ 40 ರಷ್ಟಿದ್ದ ಕಟ್-ಆಫ್ ಅಂಕಗಳನ್ನು ಸಮಿತಿಯು ಸರ್ವಾನುಮತದಿಂದ 3 ಅಂಕಗಳಷ್ಟು ಕಡಿಮೆ (ಮಾಡರೇಶನ್) ಮಾಡಲು ನಿರ್ಧರಿಸಿದೆ. ಇದರಿಂದಾಗಿ ಹೆಚ್ಚಿನ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ.

ಲಿಂಗಾವಾರು ಫಲಿತಾಂಶದ ವಿವರ:
​ಈ ಬಾರಿ ದೇಶಾದ್ಯಂತ ಒಟ್ಟು 1,15,805 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

​ಮಹಿಳಾ ಅಭ್ಯರ್ಥಿಗಳು: ಪರೀಕ್ಷೆ ಬರೆದಿದ್ದ 64,784 ಮಹಿಳೆಯರ ಪೈಕಿ 42,757 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.

​ಪುರುಷ ಅಭ್ಯರ್ಥಿಗಳು: ಪರೀಕ್ಷೆಗೆ ಹಾಜರಾಗಿದ್ದ 1,10,909 ಪುರುಷರ ಪೈಕಿ 73,045 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

​ತೃತೀಯಲಿಂಗಿ ಅಭ್ಯರ್ಥಿಗಳು: ಪರೀಕ್ಷೆ ಬರೆದಿದ್ದ 8 ಅಭ್ಯರ್ಥಿಗಳಲ್ಲಿ 3 ಜನ ಉತ್ತೀರ್ಣರಾಗಿದ್ದಾರೆ.

​ಗಮನಿಸಿ: ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ 20 ಅಭ್ಯರ್ಥಿಗಳ ಫಲಿತಾಂಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದ್ದು, ನಿರ್ಧಾರ ಬಾಕಿ ಉಳಿದಿದೆ.

AIBE-XXII (ಮುಂದಿನ ಪರೀಕ್ಷೆ) ವೇಳಾಪಟ್ಟಿ ಪ್ರಕಟ: ​ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮುಂದಿನ ಪರೀಕ್ಷೆಯಾದ AIBE-XXII ನ ಅಧಿಕೃತ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಈ ಪರೀಕ್ಷೆಯು ನವೆಂಬರ್ 29, 2026 ರಂದು ನಡೆಯಲಿದ್ದು, ಆಗಸ್ಟ್ 19 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

Leave a Reply

Your email address will not be published. Required fields are marked *