ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಪರ ತೀರ್ಪು: ‘ದಿ ರಾಂಟಿಂಗ್ ಗೋಲಾ’ ಖ್ಯಾತಿಯ ಶಮಿತಾ ಯಾದವ್‌ಗೆ ವಿಡಿಯೋ ಡಿಲೀಟ್ ಮಾಡಲು ಕೋರ್ಟ್ ಆದೇಶ!
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮುಂಬೈನ ಸಿವಿಲ್ ಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ತಮ್ಮ ವಿರುದ್ಧ ಮಾನಹಾನಿಕರ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶಮಿತಾ ಯಾದವ್ (ಇನ್‌ಸ್ಟಾಗ್ರಾಮ್‌ನಲ್ಲಿ ‘ದಿ ರಾಂಟಿಂಗ್ ಗೋಲಾ’ ಎಂದೇ ಖ್ಯಾತಿ) ಅವರಿಗೆ ಆ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಕೋರ್ಟ್ ಶುಕ್ರವಾರ (ಜುಲೈ 17) ಮಹತ್ವದ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ ಏನು?
ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1.6 ಮಿಲಿಯನ್ (16 ಲಕ್ಷ) ಫಾಲೋವರ್ಸ್ ಹೊಂದಿರುವ ಶಮಿತಾ ಯಾದವ್, ಕಳೆದ ಫೆಬ್ರವರಿ 10 ಮತ್ತು 12 ರಂದು ಎರಡು ವಿಡಿಯೋ ರೀಲ್ಸ್‌ಗಳನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋಗಳಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರನ್ನು ಅಪರಾಧಿಗಳಂತೆ ಬಿಂಬಿಸಲಾಗಿತ್ತು. ಅಲ್ಲದೆ, ಅವರಿಬ್ಬರೂ ಗೌರವವಿಲ್ಲದ ವ್ಯಕ್ತಿಗಳು ಮತ್ತು “ಅಪ್ರಾಪ್ತರನ್ನು ಟಾರ್ಗೆಟ್ ಮಾಡುವವರು” ಎಂಬಂತೆ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು ಎಂದು ಶಿಲ್ಪಾ ಶೆಟ್ಟಿ ಕೋರ್ಟ್ ಮೆಟ್ಟಿಲೇರಿದ್ದರು.
ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದರಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ದಂಪತಿಗಳು ಇಂಜೆಕ್ಷನ್ (ತಡೆಯಾಜ್ಞೆ) ಕೋರಿ ಅರ್ಜಿ ಸಲ್ಲಿಸಿದ್ದರು.

ಕೋರ್ಟ್ ನೀಡಿದ ಆದೇಶದಲ್ಲೇನಿದೆ?
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಧೀರ್‌ಕುಮಾರ್ ಬುಕ್ಕೆ ಅವರು ಶಿಲ್ಪಾ ಮತ್ತು ರಾಜ್ ಕುಂದ್ರಾ ಪರವಾಗಿ ತೀರ್ಪು ನೀಡಿದ್ದಾರೆ.
”ಮೇಲ್ನೋಟಕ್ಕೆ ಶಮಿತಾ ಯಾದವ್ ಪೋಸ್ಟ್ ಮಾಡಿರುವ ವಿಡಿಯೋಗಳು ನಿಜವಾದ ಸತ್ಯಾಂಶಗಳನ್ನು ಆಧರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅರ್ಜಿದಾರರು (ಶಿಲ್ಪಾ-ರಾಜ್) ಈ ಪೋಸ್ಟ್‌ಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ, ಮುಂದಿನ ವಿಚಾರಣೆಯವರೆಗೆ ಪ್ರತಿವಾದಿಯು ದಂಪತಿಗಳ ವಿರುದ್ಧ ಯಾವುದೇ ಮಾನಹಾನಿಕರ ಅಥವಾ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡದಂತೆ ತಡೆಯಾಜ್ಞೆ ನೀಡಲಾಗುತ್ತಿದೆ,” ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ವಿಡಿಯೋಗಳನ್ನು ತಕ್ಷಣವೇ ತೆಗೆದುಹಾಕಲು ಸೂಚನೆ
ನ್ಯಾಯಾಲಯವು ಶಮಿತಾ ಯಾದವ್ ಅವರಿಗೆ ತಮ್ಮ ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ವಿವಾದಿತ ವಿಡಿಯೋಗಳನ್ನು ತಕ್ಷಣವೇ ಹಿಂಪಡೆಯಲು ಮತ್ತು ಡಿಲೀಟ್ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಿದೆ. ಜೊತೆಗೆ, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅಥವಾ ಅವರ ಕಂಪನಿಗಳ ವಿರುದ್ಧ ಯಾವುದೇ ಅವಹೇಳನಕಾರಿ ಕಂಟೆಂಟ್ ಪೋಸ್ಟ್ ಮಾಡದಂತೆ ಶಮಿತಾ ಮತ್ತು ಅವರ ಪ್ರತಿನಿಧಿಗಳಿಗೆ ನಿರ್ಬಂಧ ಹೇರಲಾಗಿದೆ.
ಈ ಕಂಟೆಂಟ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ತೆಗೆದುಹಾಕುವಂತೆ ಶಮಿತಾ ಯಾದವ್ ಹಾಗೂ ಇತರ ‘ಜಾನ್ ಡೋ’ (ಅನಾಮಧೇಯ ವೈರಲ್ ಮಾಡಿದವರು) ಪ್ರತಿವಾದಿಗಳಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
