ಬೇಡ್ತಿ–ಹಿರೆವದ್ದತ್ತಿ ನದಿ ಜೋಡಣೆ ಯೋಜನೆಗೆ ತಡೆ ನೀಡುವಂತೆ ಕೇಂದ್ರಕ್ಕೆ ಕಾಗೇರಿ ಮನವಿ
ನವದೆಹಲಿ: ಪ್ರಸ್ತಾಪಿತ ಬೇಡ್ತಿ–ಹಿರೆವದ್ದತ್ತಿ ನದಿ ಜೋಡಣೆ ಯೋಜನೆ(Bedti–Hirevaddatti River Linking Project)ಗೆ ತಡೆ ನೀಡುವಂತೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಯೋಜನೆಗೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ಒಪ್ಪಿಗೆ ನೀಡಿರುವ ಬೆನ್ನಲ್ಲೇ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಮವಾರ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಿ ಯೋಜನೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ.
ಭೇಟಿಯ ವೇಳೆ ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಸಂಸದ ಕಾಗೇರಿ, ಯೋಜನೆಗೆ ರಾಜ್ಯ ಸರ್ಕಾರವು ಡಿಪಿಆರ್ ಸಿದ್ಧಪಡಿಸಲು ಅನುಮತಿ ನೀಡಿರುವ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಪರಿಸರ ವೈಶಿಷ್ಟ್ಯ, ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ವ್ಯವಸ್ಥೆ ಹಾಗೂ ಜೀವ ವೈವಿಧ್ಯತೆಯನ್ನು ಪರಿಗಣಿಸಿದರೆ, ಯಾವುದೇ ದೊಡ್ಡ ನೀರಾವರಿ ಅಥವಾ ನದಿ ಜೋಡಣೆ ಯೋಜನೆಯನ್ನು ಕೈಗೊಳ್ಳುವ ಮೊದಲು ಜಿಲ್ಲೆಯ ‘ಧಾರಣ ಸಾಮರ್ಥ್ಯ’ (Carrying Capacity) ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
ಪ್ರಸ್ತುತ ಆರಂಭವಾಗಿರುವ ಡಿಪಿಆರ್ ತಯಾರಿಕೆ ಸೇರಿದಂತೆ ಈ ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಬೇಡ್ತಿ–ಹಿರೆವದ್ದತ್ತಿ ನದಿ ಜೋಡಣೆ ಯೋಜನೆ ಘೋಷಣೆಯಾದ ಬಳಿಕ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪರಿಸರ ಸಂಘಟನೆಗಳು, ರೈತ ಸಂಘಗಳು, ಜನಪ್ರತಿನಿಧಿಗಳು ಹಾಗೂ ನಾಗರಿಕರಿಂದ ಯೋಜನೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತವಾಗುತ್ತಿದೆ. ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಮತ್ತು ಜಿಲ್ಲೆಯ ನೈಸರ್ಗಿಕ ಸಂಪತ್ತಿನ ಉಳಿವಿನ ದೃಷ್ಟಿಯಿಂದ ಯೋಜನೆಯನ್ನು ಮರುಪರಿಶೀಲಿಸುವಂತೆ ವಿವಿಧ ಸಂಘಟನೆಗಳು ಈಗಾಗಲೇ ಆಗ್ರಹಿಸಿವೆ. ಇದೀಗ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೇರವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಯೋಜನೆಯ ಡಿಪಿಆರ್ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಿರುವುದು ಈ ಹೋರಾಟಕ್ಕೆ ಬಲಬಂದಂತಾಗಿದೆ.
