ಕರಾವಳಿ ಅಭಿವೃದ್ಧಿ ಮಂಡಳಿಯ ಸರ್ವ ಸದಸ್ಯರ ಸಾಮಾನ್ಯ ಸಭೆ: ಶಾಸಕ ಭೀಮಣ್ಣ ನಾಯ್ಕ ಭಾಗಿ
ಕಾರವಾರ: ಕರಾವಳಿ ಅಭಿವೃದ್ಧಿ ಮಂಡಳಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯು ದಿನಾಂಕ 18.07.2026 ರಂದು ಬೆಳಿಗ್ಗೆ 11:30 ಕ್ಕೆ ಕಾರವಾರದ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಮಂಡಳಿಯ ಮಾನ್ಯ ಅಧ್ಯಕ್ಷರಾದ ಶ್ರೀ ಎಂ.ಎ ಗಫೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರಮುಖ ಸಭೆಯಲ್ಲಿ, ಶಿರಸಿ ಸಿದ್ದಾಪುರ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ ಅವರು ಪಾಲ್ಗೊಂಡು ಕರಾವಳಿ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಮುಖ ಸಲಹೆ-ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ವಿಶೇಷವಾಗಿ ಮಾತನಾಡಿದ ಶಾಸಕ ಶ್ರೀ ಭೀಮಣ್ಣ ಟಿ. ನಾಯ್ಕ ಅವರು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕಿಂಡಿ ಅಣೆಕಟ್ಟುಗಳು (Vented Dams) ಮತ್ತು ಕಾಲುಸಂಕಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಗ್ರಾಮೀಣ ಭಾಗದ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪ್ರಮುಖ ಜಲಪಾತಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನವನ್ನು ಮಂಜೂರು ಮಾಡಬೇಕೆಂದು ಮಂಡಳಿಯ ಅಧ್ಯಕ್ಷರಿಗೆ ಅಧಿಕೃತವಾಗಿ ಮನವಿ ಮಾಡಿಕೊಂಡರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳು , ಜಿಲ್ಲಾ ಪಂಚಾಯತ್ CEO, ಮಂಡಳಿಯ ಕಾರ್ಯದರ್ಶಿಗಳು, ವಿವಿಧ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
