ಶಿರಸಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ- ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು, ಕೆಲವೆಡೆ ಏರಿಯಾಗೇ ಏರಿಯಾವೇ ಜಲಾವೃತ

0
WhatsApp Image 2026-08-01 at 13.06.39

ಶಿರಸಿ: ನಗರದಲ್ಲಿ ನಿನ್ನೆ ರಾತ್ರಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ರಾತ್ರಿ ಕೇಲವೇ ಗಂಟೆ ಸುರಿದ ಮಳೆಗೆ ನಗರದ ರಸ್ತೆಗಳು ಕೆರೆಗಳಂತಾಗಿ ಬದಲಾಗಿದ್ರೆ, ಇನ್ನು ಕೆಲವೆಡೆ ಏರಿಯಾಗೆ ಏರಿಯಾವೇ ಜಲಾವೃತಗೊಂಡಿವೆ. ವರುಣನ ಅಟ್ಟಹಾಸದಿಂದ ಶಿರಸಿಯ ಜನರು ಹೈರಾಣಾಗಿದ್ದರೆ, ಇನ್ನೊಂದೆಡೆ ನಗರದ ದುರವಸ್ಥೆ ಮತ್ತು ನಗರಸಭೆಯ ದುರಾಡಳಿತವೂ ಬಯಲಾಗಿದೆ.

ರಾತ್ರಿ ಸತತವಾಗಿ ಸುರಿದ ಮಳೆಗೆ ಭಾಗಶಃ ಶಿರಸಿ ನಗರದ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಮನೆಗಳಿಗೂ ನೀರು ನುಗ್ಗಿದ್ದು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳು ನೀರಿನಿಂದ ಆವೃತಗೊಂಡ ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.

ನಗರದ ಐತಿಹಾಸಿಕ ಕೋಟೆಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಉಕ್ಕಿ ಹರಿದಿದ್ದು, ಹೆಚ್ಚುವರಿ ನೀರು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಿದಿದೆ. ಕೆರೆ ಉಕ್ಕಿ ಹರಿಯುತ್ತಿರುವ ಪರಿಣಾಮ ರಸ್ತೆಯುದ್ಧಕ್ಕೂ ನೀರು ಹರಿದು ವಾಹನ ಸಂಚಾರಕ್ಕೂ ತೊಂದರೆಯುಂಟಾಯಿತು.

ಇನ್ನು ನಗರದ ಶ್ರೀಧರ ನಗರ ಹಾಗೂ ಸಮೃದ್ಧಿ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗಳ ಬಾಗಿಲಿನವರೆಗೂ ತಲುಪಿದೆ. ಅಯ್ಯಪ್ಪ ನಗರದ ಚೌಡೇಶ್ವರಿ ಕಾಲೋನಿಯ ಬಹುತೇಕ ರಸ್ತೆಗಳು ಸಂಪೂರ್ಣ ನೀರಿನಿಂದ ಆವೃತಗೊಂಡಿದ್ದು, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಓಡಾಡುವುದಕ್ಕೂ ತೊಂದರೆ ಉಂಟಾಗಿದೆ.

ಈ ಮಳೆಯಿಂದ ಶಿರಸಿ ನಗರಸಭೆಯ ದುರಾಡಳಿತವೂ ಬಯಲಿಗೆ ಬಂದಿದ್ದು, ನಗರದ ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಪರಿಣಾಮ ಗಟಾರಗಳು ಕಟ್ಟಿಕೊಂಡು ಮಳೆ ನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *