ಯಾವೊಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಬಿಟ್ಟುಹೋಗಬಾರದು: ಬಿಎಲ್ಒಗಳಿಗೆ ಶಾಸಕ ಭೀಮಣ್ಣ ನಾಯ್ಕ ಸೂಚನೆ

ಶಿರಸಿ: ನಗರದಾದ್ಯಂತ ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ (SIR) ಪ್ರಕ್ರಿಯೆಯನ್ನು ಮಾನ್ಯ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ ಅವರು ನಿನ್ನೆ ಖುದ್ದಾಗಿ ವೀಕ್ಷಿಸಿ, ಪರಿಶೀಲನೆ ನಡೆಸಿದರು.
ನಗರದ ವಿವಿಧ ವಾರ್ಡ್ಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ದಾಖಲಾತಿ ಕಾರ್ಯವನ್ನು ವೀಕ್ಷಿಸಿದ ಶಾಸಕರು, ಸ್ಥಳದಲ್ಲಿದ್ದ ಬಿಎಲ್ಒ (BLO) ಗಳೊಂದಿಗೆ ಚರ್ಚಿಸಿ ಪ್ರಗತಿಯನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಶಾಸಕರು, “ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಪವಿತ್ರ ಹಕ್ಕು. ಕ್ಷೇತ್ರದಲ್ಲಿ ೧೮ ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರು ಸೇರಿದಂತೆ ಯಾವೊಬ್ಬ ಅರ್ಹ ಮತದಾರನೂ ಸಹ ತಾಂತ್ರಿಕ ಕಾರಣಗಳಿಂದ ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಜಾಗ್ರತೆ ವಹಿಸಬೇಕು. ಮನೆ-ಮನೆ ಸಮೀಕ್ಷೆಯನ್ನು ಅತ್ಯಂತ ನಿಖರವಾಗಿ ನಡೆಸಿ, ಅರ್ಹರೆಲ್ಲರಿಗೂ ಮತದಾನದ ಹಕ್ಕು ಸಿಗುವಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು,” ಎಂದು ಬಿಎಲ್ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
