ಉತ್ತರ ಕನ್ನಡಿಗರಿಗೆ ಮತ್ತೊಂದು ಅನ್ಯಾಯ-ತೀವ್ರ ವಿರೋಧದ ನಡುವೆಯೂ ಮಂಗಳೂರು ಹೈಕೋರ್ಟ್ ಪೀಠಕ್ಕೆ ಸೇರಲಿದ್ಯಾ ಜಿಲ್ಲೆ?
ಶಿರಸಿ: ಒಂದರ ಮೇಲೊಂದು ಅನ್ಯಾಯ ಎದುರಿಸುತ್ತಲೇ ಬರುತ್ತಿರುವ ನಮ್ಮ ಉತ್ತರ ಕನ್ನಡ ಜಿಲ್ಲೆಯ ಜನರು ಇದೀಗ ಮತ್ತೊಂದು ಮಹಾ ಅನ್ಯಾಯವನ್ನು ಎದುರಿಸಲು ಸಜ್ಜಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ನಮಗೆ ಬೇಕಾಗಿದ್ದನ್ನು ಕೇಳುವಾಗ, ಕಣ್ಣು ಕಿವಿ ಯಾವುದು ಇಲ್ಲದಂತೆ ವರ್ತಿಸುವ ಸರ್ಕಾರಗಳು, ಬೇಡದನ್ನು ಮಾಡೋದಕ್ಕೆ ಮಾತ್ರ ಭಾರೀ ಆಸಕ್ತಿ ತೋರಿಸುತ್ತವೆ. ಅದರಂತೆ ಜಿಲ್ಲೆಯ ಜನರು ಎಷ್ಟೇ ಬೇಡ ಬೇಡ ಎನ್ನುತ್ತಿದ್ದರೂ, ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಿಂದ ಮಂಗಳೂರಿಗೆ ಸೇರಿಸಲು ಇದೀಗ ತಯಾರಿ ನಡೆದಿದೆ.
ಉತ್ತರ ಕನ್ನಡಿಗರ ತೀವ್ರ ವಿರೋಧದ ನಡುವೆಯೂ ಜಿಲ್ಲೆಯನ್ನು ಸಮೀಪದ ಧಾರವಾಡ ಪೀಠದ ಬದಲು, ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ದೂರದ ಮಂಗಳೂರು ಪೀಠಕ್ಕೆ ಸೇರಿಸುವ ಕಾರ್ಯಕ್ಕೆ ಭರದಿಂದ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಇನ್ನೆರಡು ತಿಂಗಳಿನಲ್ಲಿಯೇ ಮಂಗಳೂರು ಹೈಕೋರ್ಟ್ ಪೀಠ ಕಾರ್ಯಾರಂಭ ಮಾಡಲಿದೆ ಎನ್ನಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯನ್ನೂ ಈ ಹೊಸ ಹೈಕೋರ್ಟ್ ಪೀಠಕ್ಕೆ ಸೇರಿಸುವುದು ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ.
ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಹೈಕೋರ್ಟ್ ಪೀಠವನ್ನು ಆರಂಭಿಸಲು ಸ್ಥಳ ಗುರುತಿಸಲಾಗಿದ್ದು, ಶೀಘ್ರವೇ ಕಟ್ಟಡದ ನವೀಕರಣ ಕಾಮಗಾರಿಯೂ ಆರಂಭವಾಗಲಿದೆಯಂತೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಈ ಹೊಸ ಪೀಠದ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.
ಉಳಿದ ಜಿಲ್ಲೆಗಳಿಗೆ ಇದರಿಂದ ಲಾಭವಾಗಬಹುದೇನೋ. ಆದರೆ ನಮ್ಮ ಜಿಲ್ಲೆಗೆ ಮಾತ್ರ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹೀಗಾಗಿ ಉತ್ತರ ಕನ್ನಡವನ್ನು ಮಂಗಳೂರು ಹೈ ಕೋರ್ಟ್ ಪೀಠಕ್ಕೆ ಸೇರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಮಂಗಳೂರಿಗಿಂತ ಧಾರವಾಡವೇ ಅತ್ಯಂತ ಹತ್ತಿರದಲ್ಲಿದೆ. ಈಗಿರುವ ಧಾರವಾಡ ಪೀಠವನ್ನು ಬಿಟ್ಟು, ಕರಾವಳಿ ಜಿಲ್ಲೆ ಎಂಬ ಒಂದೇ ಕಾರಣಕ್ಕೆ ಇಡೀ ಉತ್ತರ ಕನ್ನಡವನ್ನು ಮಂಗಳೂರು ಪೀಠಕ್ಕೆ ಸೇರಿಸುತ್ತಿರುವುದು ಜಿಲ್ಲೆಯ ಜನರಿಗೆ ಮಾಡುತ್ತಿರುವ ಮತ್ತೊಂದು ಅನ್ಯಾಯ ಎಂದೇ ಹೇಳಲಾಗುತ್ತಿದೆ.
ಜಿಲ್ಲಾ ಕೇಂದ್ರ ಕಾರವಾರದಿಂದ ಧಾರವಾಡ ಕೇವಲ 174 ಕಿಲೋಮೀಟರ್ ದೂರವಿದ್ದರೆ, ಹಳಿಯಾಳ, ಜೋಯಿಡಾ, ದಾಂಡೇಲಿ, ಮುಂಡಗೋಡ, ಯಲ್ಲಾಪುರ, ಶಿರಸಿ ತಾಲೂಕುಗಳಿಗೆ ಇನ್ನೂ ಹತ್ತಿರದಲ್ಲಿದೆ. ಆದರೆ ಕಾರವಾರದಿಂದ ಮಂಗಳೂರಿಗೆ ಹೋಗಬೇಕೆಂದರೆ 260 ಕಿಲೋಮೀಟರ್‌ಗಿಂತ ಹೆಚ್ಚು ದೂರ ಕ್ರಮಿಸಬೇಕು. ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಘಟ್ಟದ ಮೇಲಿನ ತಾಲೂಕುಗಳ ಜನ ಮಂಗಳೂರಿಗೆ ಹೋಗಿ ಬರಬೇಕು ಅಂದರೆ ಒಂದು ದಿನವೂ ಸಾಲುವುದಿಲ್ಲ. ಹೀಗಿದ್ದೂ ಜೆಲ್ಲೆಯನ್ನು ಮಂಗಳೂರು ಪೀಠಕ್ಕೆ ಸೇರಿಸಲು ಹೊರಟಿರುವುದು ಎಷ್ಟು ಸರಿ ಎನ್ನುವುದು ಜಿಲ್ಲೆಯ ಜನರ ಪ್ರಶ್ನೆ.
ಇನ್ನಾದರೂ ಸರ್ಕಾರ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಿರ್ಧಾರವನ್ನು ಬದಲಿಸುತ್ತಾರಾ? ಅಥವಾ ನೀವಿರೋದೇ ಅನ್ಯಾಯ ಅನುಭವಿಸೋಕೇ ಅಂತಾ ಸುಮ್ಮನಾಗ್ತಾರಾ ಅನ್ನೋದನ್ನ ಕಾದುನೋಡ್ಬೇಕಿದೆ.
