ಸಂಬಂಧಿಕರ ಮನೆಗೆ ಹೊರಟಿದ್ದವಳು ಸೇರಿದ್ದು ಮಸಣಕ್ಕೆ- ಹೆದ್ದಾರಿ ದಾಟುವಾಗ ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು

0
WhatsApp Image 2026-08-10 at 22.19.02

ಕುಮಟಾ: ರಾಷ್ಟ್ರೀಯ ಹೆದ್ದಾರಿ 66 ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಅಘಾತಕಾರಿ ಘಟನೆ ತಾಲೂಕಿನ ಬರ್ಗಿ ಸಮೀಪದ ಸರ್ಕಾರಿ ಪ್ರೌಢಶಾಲೆ ಬಳಿ ಸೋಮವಾರ ನಡೆದಿದೆ.

ಮೃತರನ್ನು ಕುಮಟಾ ಶಶಿಹಿತ್ಲ ನಿವಾಸಿ ದುರ್ಗಿ ಮಾದೇವ ಹರಿಕಾಂತ (62) ಎಂದು ಗುರುತಿಸಲಾಗಿದೆ. ದುರ್ಗಿ ಅವರು ಬರ್ಗಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಲು ಕುಮಟಾದಿಂದ ಬಂದು ಬರ್ಗಿಯಲ್ಲಿ ಬಸ್ ಇಳಿದಿದ್ದರು. ಬಳಿಕ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರು ಸರ್ಕಾರಿ ಪ್ರೌಢಶಾಲೆ ಸಮೀಪ ಹೆದ್ದಾರಿ ದಾಟಲು ಮುಂದಾಗಿದ್ದರು ಎನ್ನಲಾಗಿದೆ.

ಈ ವೇಳೆ ಕುಮಟಾ ಕಡೆಯಿಂದ ಗೋಕರ್ಣದತ್ತ ತೆರಳುತ್ತಿದ್ದ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ದುರ್ಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದವರು ಸಿದ್ದಾಪುರದಿಂದ ಗೋಕರ್ಣದತ್ತ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬರ್ಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ವಾಹನಗಳ ವೇಗ ನಿಯಂತ್ರಣ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಐಆರ್‌ಬಿ ಕಂಪನಿ ಹಾಗೂ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *