ರಾಷ್ಟ್ರಪತಿಯವರ ಎಟ್ ಹೋಮ್ ಕಾರ್ಯಕ್ರಮಕ್ಕೆ ಆಯ್ಕೆಯಾದ ಶಿರಸಿಯ ಪ್ರತಿಭೆ ಸುಜಾತ ನಾಯ್ಕ
ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ ಸುದೀರ್ಘ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾಜಿ ರೇಂಜರ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಯುವ ಸಮಿತಿಯ ಉಪಾಧ್ಯಕ್ಷೆ ಕುಮಾರಿ ಸುಜಾತಾ ಸುರೇಶ್ ನಾಯ್ಕ್ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಗಸ್ಟ್ 15ರಂದು ನಡೆಯಲಿರುವ ಗೌರವಾನ್ವಿತ ರಾಷ್ಟ್ರಪತಿಯವರ ‘ಎಟ್ ಹೋಂ ರಿಸೆಪ್ಷನ್’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಸುಜಾತಾ ನಾಯ್ಕ್ ಅವರ ಈ ಸಾಧನೆಗಾಗಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ವಿಶೇಷ ಅಭಿನಂದನೆ ಸಲ್ಲಿಸಿ ಪ್ರಶಂಸಿದ್ದಾರೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ರೇಂಜರ್ ಆಗಿ (2023-24) ಪದವಿ ಪೂರ್ಣಗೊಳಿಸಿರುವ ಸುಜಾತಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಯುವ ಆಪದ್ ಮಿತ್ರ’ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಇವರ ಈ ನಿರಂತರ ಜನಸೇವೆಯನ್ನು ಗುರುತಿಸಿ ಈ ಉನ್ನತ ಗೌರವ ಒಲಿದುಬಂದಿದೆ.
ದಾವಣಗೆರೆಯ ಕೊಂಡಜ್ಜಿಯ ‘ಶ್ರೀ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ’ದಲ್ಲಿ ‘ಯುವ ಆಪದ್ ಮಿತ್ರ’ ತರಬೇತಿ ಪಡೆದಿರುವ ಸುಜಾತಾ, ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರಾ ಸೇವಾ ಶಿಬಿರ ಹಾಗೂ ಮುಂಡಗೋಡಿನ ಶ್ರೀ ಮಾರಿಕಾಂಬ ಜಾತ್ರಾ ಸೇವಾ ಶಿಬಿರಗಳಲ್ಲಿ ಸ್ವಯಂಸೇವಕಿಯಾಗಿ ಸಕ್ರಿಯ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ 29ನೇ ರಾಜ್ಯ ಜಾಂಬೋರೇಟ್ ಹಾಗೂ ರಾಜ್ಯ ಯುವ ಸಮಿತಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಇಷ್ಟೇ ಅಲ್ಲದೆ, ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಪ್ರಕೃತಿ ಚಾರಣ ಶಿಬಿರ ಮತ್ತು ಕಾರವಾರದ ಅಣು ವಿಕಿರಣ ಕೈಗಾರಿಕಾ ತರಬೇತಿ ಶಿಬಿರದಲ್ಲೂ ಪಾಲ್ಗೊಂಡಿದ್ದರು.
ಶಿರಸಿಗೆ ಹೆಮ್ಮೆಯ ಕ್ಷಣ: ಸುಜಾತಾ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಶಾಸಕ ಭೀಮಣ್ಣ ನಾಯ್ಕ, “ಶಿರಸಿ ತಾಲೂಕಿನ ಗ್ರಾಮೀಣ ಹಿನ್ನೆಲೆಯಿಂದ ಬಂದು, ಸ್ಕೌಟ್ಸ್ ಅಂಡ್ ಗೈಡ್ಸ್ ಮೂಲಕ ಸಮಾಜ ಸೇವೆ ಮಾಡುತ್ತಾ ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಅತ್ಯುನ್ನತ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಶಿರಸಿ ಕ್ಷೇತ್ರಕ್ಕೆ ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯ. ಸುಜಾತಾ ನಾಯ್ಕ್ ಅವರ ಈ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ” ಎಂದು ಶುಭ ಹಾರೈಸಿದ್ದಾರೆ.
