ಕೊನೆ ಕ್ಷಣದಲ್ಲಿ ಮಂಕಾಳು ವೈದ್ಯಗೆ ಬಿಗ್ ಶಾಕ್- ಸಚಿವರ ಪಟ್ಟಿಯಿಂದಲೇ ಭಟ್ಕಳ ಶಾಸಕ ಔಟ್
ಕಾರವಾರ: ಈ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಉತ್ತರ ಕನ್ನಡ ಜಿಲ್ಲೆಯನ್ನ ಕಂಡರೆ ಯಾಕಿಷ್ಟು ತಾತ್ಸಾರವೋ ಗೊತ್ತಿಲ್ಲ. ಬರೀ ವೋಟ್ ಹಾಕೋಕೆ ಮಾತ್ರ ನಮ್ಮ ಜಿಲ್ಲೆಯ ಜನರು ಬೇಕು. ಆದರೆ ಅಧಿಕಾರ ಅಂತಾ ಬಂದಾಗ ಮಾತ್ರ ಬರೀ ಕಡೆಗಣನೆ. ಡಿಕೆಶಿ ಮೊದಲ ಕ್ಯಾಬಿನೆಟ್ ರಚನೆಯ ವೇಳೆಯೇ ಉತ್ತರ ಕನ್ನಡ ಜಿಲ್ಲೆಗೆ ಭಾರೀ ನಿರಾಸೆಯಾಗಿತ್ತು. ಸಂಪುಟ ವಿಸ್ತರಣೆ ವೇಳೆಯಾದರೂ ಜಿಲ್ಲೆಯ ಯಾರಾದರೂ ಒಬ್ಬ ಶಾಸಕನಿಗೆ ಸಚಿವ ಸ್ಥಾನ ಸಿಗಬಹುದು ಅಂತಾ ನಿರೀಕ್ಷಿಸಲಾಗಿತ್ತು. ಆದರೆ ಈಗ ಮತ್ತೆ ಜಿಲ್ಲೆಗೆ ಬಿಗ್ ಶಾಕ್ ಎದುರಾಗಿದೆ.

ಹೌದು..ಬೆಳಿಗ್ಗೆ ಬಿಡುಗಡೆಯಾಗಿದ್ದ ನೂತನ ಸಚಿವರ ಪಟ್ಟಿಯಲ್ಲಿ ಜಿಲ್ಲೆಯಿಂದ ಭಟ್ಕಳ ಶಾಸಕ ಮಾಂಕಾಳು ವೈದ್ಯ ಅವರ ಹೆಸರು ಕೂಡ ಕಾಣಿಸಿಕೊಂಡಿತ್ತು. ಆದರೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕೊನೆ ಕ್ಷಣದಲ್ಲಿ ಮಹತ್ವದ ತಿರುವು ಪಡೆದುಕೊಂಡಿದ್ದು, ಸಚಿವ ಸ್ಥಾನ ಸಿಕ್ಕ ಖುಷಿಯಲ್ಲಿದ್ದ ಶಾಸಕ ಮಂಕಾಳು ವೈದ್ಯ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಕೊನೆ ಕ್ಷಣದಲ್ಲಿ ಮಾಂಕಾಳು ವೈದ್ಯ ಬದಲಿಗೆ ಮಾಜಿ ಸಚಿವ, ದಾವಣಗೆರೆಯ ಪ್ರಭಾವಿ ಶಾಮನೂರು ಕುಟುಂಬದ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ ಜಿಲ್ಲೆಯ ಒಬ್ಬನೇ ಒಬ್ಬ ಶಾಸಕನಿಗೂ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಂತಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಅಂತಿಮ ಹಂತದಲ್ಲಿ ಈ ಪಟ್ಟಿಯಲ್ಲಿ ಬದಲಾವಣೆ ಮಾಡಿದೆ ಎನ್ನಲಾಗುತ್ತಿದೆ. ಆರಂಭಿಕ ಹಂತದಲ್ಲಿ ಮಂಕಾಳು ವೈದ್ಯ ಅವರ ಹೆಸರು ಪರಿಗಣನೆಯಲ್ಲಿತ್ತು ಎಂಬ ರಾಜಕೀಯ ವಲಯದ ಚರ್ಚೆಗಳಿದ್ದರೂ, ಅಂತಿಮ ಪಟ್ಟಿಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಅವಕಾಶ ದೊರೆತಿದೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರಿದ್ದು, ಇದರಲ್ಲಿ ಆರ್.ವಿ. ದೇಶಪಾಂಡೆ ಹಾಗೂ ಮಂಕಾಳು ವೈದ್ಯ ಸಚಿವ ಸ್ಥಾನಕ್ಕಾಗಿ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರು. ಅಂತಿಮ ಹಂತದಲ್ಲಿ ಮಾಂಕಾಳು ವೈದ್ಯ ಹೆಸರು ನೂತನ ಸಚಿವರ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಮೀನುಗಾರ ಸಮುದಾಯದ ಪ್ರಾತಿನಿಧ್ಯವನ್ನು ಪರಿಗಣಿಸಿ ಮಂಕಾಳು ವೈದ್ಯ ಅವರಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿತ್ತು. ಆದರೆ ಪ್ರಮಾಣವಚನ ಸಮಾರಂಭದ ಮುನ್ನವೇ ಪಟ್ಟಿಯಲ್ಲಿ ಬದಲಾವಣೆ ನಡೆದಿದ್ದು, ಮಾಂಕಾಳು ವೈದ್ಯಗೆ ನಿರಾಸೆ ಉಂಟಾಗಿದೆ. ಇದರಿಂದ ಅವರ ಅಭಿಮಾನಿಗಳಿಗೂ ಬೇಸರ ಉಂಟಾಗಿದೆ.
ಅದೇನೇ ಇರಲಿ..ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಆಡಳಿತಕ್ಕೆ ಬರುವುದರಲ್ಲಿ ಜಿಲ್ಲೆಯ ಮತದಾರರ ಪಾತ್ರವೂ ಇದೆ. ಆದರೆ ಸಂಪುಟ ವಿಸ್ತರಣೆ ವೇಳೆ ನಮ್ಮ ಜಿಲ್ಲೆಯನ್ನು ಹೀಗೆ ಕಡೆಗಣಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಉತ್ತರ ಕನ್ನಡಿಗರ ಪ್ರಶ್ನೆ.
