ಇಂದೇ ನೂತನ ಸಚಿವರ ಪ್ರಮಾಣವಚನ-ಜಿಲ್ಲೆಯಿಂದ ಮತ್ತೊಮ್ಮೆ ಮಂಕಾಳು ವೈದ್ಯ-ಇಲ್ಲಿದೆ ನೂತನ ಸಚಿವರ ಪಟ್ಟಿ
ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಹೈಕಮಾಂಡ್‌ನೊಂದಿಗೆ ನಡೆದ ಸರಣಿ ಸಭೆಗಳ ನಂತರ ನೂತನ ಸಚಿವರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ 13 ಸಚಿವರಿದ್ದು, ಇನ್ನುಳಿದ 20 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದೆ.
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಹಳೆಯ ಮೈಸೂರು ಭಾಗ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ರಾಹುಲ್ ಗಾಂಧಿ ಅವರ ಸೂಚನೆಯಂತೆ ಹಿರಿಯ ಅನುಭವಿಗಳ ಜೊತೆಗೆ ಯುವ ಶಾಸಕರಿಗೂ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಿಂದ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಮಂಕಾಳ್ ಎಸ್. ವೈದ್ಯ ಅವರು ಮತ್ತೊಮ್ಮೆ ಸಚಿವರಾಗಿ ಸಂಪುಟ ಸೇರ್ಪಡೆಯಾಗಿದ್ದಾರೆ.

ಮಂಕಾಳು ವೈದ್ಯ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರಿಗೆ ಸಚಿವ ಸ್ಥಾನ ನೀಡಿರುವುದು ಉತ್ತರ ಕನ್ನಡ ಜಿಲ್ಲೆಗೆ ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಮಂಕಾಳು ವೈದ್ಯ ಅವರು, ಮತ್ತೊಮ್ಮೆ ಸಚಿವರಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಭಟ್ಕಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಂಕಾಳು ವೈದ್ಯ ಅವರು ಕರಾವಳಿ ಭಾಗದ ಅಭ್ಯರ್ಥಿಯಾಗಿ, ಮೀನುಗಾರರ ಸಮಸ್ಯೆಗಳ ಪರಿಹಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ ನಾಯಕರಾಗಿ ಹೆಸರುವಾಸಿಯಾಗಿದ್ದಾರೆ.
ಸೋಮವಾರ ಸಂಪುಟ ಸೇರುವವರ ಪಟ್ಟಿ ಇಲ್ಲಿದೆ :

ಲಕ್ಷ್ಮಣ ಸವದಿ(ಅಥಣಿ)
ಮಾಗಡಿ ಬಾಲಕೃಷ್ಣ(ಮಾಗಡಿ)
ವಿಜಯಾನಂದ ಕಾಶಪ್ಪನವರ್(ಹುನಗುಂದ)
ಶಿವರಾಜ್ ತಂಗಡಗಿ( ಕನಕಗಿರಿ)
ಎಸ್.ಎಸ್.ಮಲ್ಲಿಕಾರ್ಜುನ(ದಾವಣಗೆರೆ ಉತ್ತರ)
ಪುಟ್ಟರಂಗಶೆಟ್ಟಿ(ಚಾಮರಾಜನಗರ)
ಸಂತೋಷ್ ಲಾಡ್(ಕಲಘಟಗಿ)
ಡಾ.ಅಜಯ್ ಸಿಂಗ್(ಜೇವರ್ಗಿ)
ಗಾಯತ್ರಿ ಶಾಂತೇಗೌಡ (ಮೇಲ್ಮನೆ ಸದಸ್ಯೆ)
ರಿಜ್ವಾನ್ ಅರ್ಷದ್ (ಶಿವಾಜಿ ನಗರ)
ಝಮೀರ್ ಅಹ್ಮದ್ ಖಾನ್(ಚಾಮರಾಜಪೇಟೆ)
ರುದ್ರಪ್ಪ ಲಮ್ಹಾಣಿ
ಶಿವಲಿಂಗೇಗೌಡ (ಅರಸೀಕೆರೆ)
ಚೆಲುವರಾಯಸ್ವಾಮಿ (ನಾಗಮಂಗಲ)
ಬಸವರಾಜ ರಾಯರೆಡ್ಡಿ (ಯಲಬುರ್ಗಾ)
ಟಿ.ರಘುಮೂರ್ತಿ(ಚಳ್ಳಕೆರೆ)
ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ)
ಮಂಕಾಳ ವೈದ್ಯ
ಬಸವಂತಪ್ಪ (ಮಾಯಕೊಂಡ)
ಮಧು ಬಂಗಾರಪ್ಪ (ಸೊರಬ)
ಇಂದೇ ನೂತನ ಸಚಿವರ ಪ್ರಮಾಣ ವಚನ: ಇನ್ನು ಹೊಸದಾಗಿ ಡಿಕೆಶಿ ಸಂಪುಟ ಸೇರುತ್ತಿರುವ ಸಚಿವರ ಪ್ರಮಾಣ ವಚನ ಇಂದು (ಸೋಮವಾರ) ಸಂಜೆ 4.05ಕ್ಕೆ ನಿಗದಿಯಾಗಿದೆ. ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ
