ಶಾಸಕರ ನಡೆಗೆ ಜನಮೆಚ್ಚುಗೆ- ಸ್ವಂತ ಹಣದಿಂದ ಮಾರಿಕಾಂಬಾ ಲೈಫ್ ಗಾರ್ಡ್ ತಂಡಕ್ಕೆ ಅಗತ್ಯ ಸಾಮಗ್ರಿ ನೀಡಿದ ಭೀಮಣ್ಣ ನಾಯ್ಕ

0
IMG-20260805-WA0029

ಶಿರಸಿ: ಆಪತ್ತಿನಲ್ಲಿರುವ ಸಾರ್ವಜನಿಕರ ಜೀವ ರಕ್ಷಣೆಗೆ ಧಾವಿಸುವ ಇಲ್ಲಿನ ‘ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್’ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಾಸಕರಾದ ಭೀಮಣ್ಣ ಟಿ. ನಾಯ್ಕ್ ಅವರು, ತಮ್ಮ ವೈಯಕ್ತಿಕ ಹಣದಿಂದ ₹1 ಲಕ್ಷಕ್ಕೂ ಅಧಿಕ ಮೌಲ್ಯದ ತುರ್ತು ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಿ ಉದಾರತೆ ಮೆರೆದಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರನ್ನು ರಕ್ಷಿಸುವ ವೇಳೆ ಲೈಫ್ ಗಾರ್ಡ್ ತಂಡಕ್ಕೆ ಅತ್ಯಗತ್ಯವಾದ ಸುರಕ್ಷತಾ ಪರಿಕರಗಳ ಕೊರತೆ ಇತ್ತು. ಈ ಕುರಿತು ತಂಡದ ಸದಸ್ಯರು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದರು. ಇತ್ತೀಚಿಗೆ ತಾಲೂಕಿನ ಉಂಚಳ್ಳಿಯಲ್ಲಿ ನಡೆದಿದ್ದ ಘಟನೆಯ ಬಗ್ಗೆ ವರದಿ ಮಾಡಿದ್ದ ಶಿರಸಿ ನ್ಯೂಸ್ ಕೂಡ ಈ ಬಗ್ಗೆ ಬೆಳಕು ಚೆಲ್ಲಿತ್ತು. ಇದೀಗ ಸಾರ್ವಜನಿಕರ ಹಿತದೃಷ್ಟಿ ಹಾಗೂ ತಂಡದ ಶ್ರಮವನ್ನು ಗುರುತಿಸಿದ ಶಾಸಕರು, ಯಾವುದೇ ಸರ್ಕಾರದ ಅನುದಾನಕ್ಕೆ ಕಾಯದೇ ತಮ್ಮ ಸ್ವಂತ ವೆಚ್ಚದಲ್ಲೇ ಸುರಕ್ಷತಾ ಸಾಧನಗಳನ್ನು ಖರೀದಿಸಿ ಹಸ್ತಾಂತರಿಸಿದ್ದಾರೆ.

ಸಾಮಗ್ರಿ ವಿತರಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಮಾರಿಕಾಂಬಾ ಲೈಫ್ ಗಾರ್ಡ್ ತಂಡವು ಪ್ರಾಣದ ಹಂಗನ್ನೂ ಲೆಕ್ಕಿಸದೇ ನಿಸ್ವಾರ್ಥವಾಗಿ ಸಾರ್ವಜನಿಕರ ರಕ್ಷಣೆಗೆ ಧಾವಿಸುತ್ತಿರುವುದು ಶ್ಲಾಘನೀಯ. ಅವರು ಕರ್ತವ್ಯ ನಿರ್ವಹಿಸುವಾಗ ಅವರ ಜೀವ ರಕ್ಷಣೆಯೂ ಮುಖ್ಯ. ಹೀಗಾಗಿ ಅವರ ಮನವಿಗೆ ಸ್ಪಂದಿಸಿ ಈ ಸುರಕ್ಷತಾ ಸಾಮಗ್ರಿಗಳನ್ನು ನೀಡಲಾಗಿದೆ ಎಂದರು.

ವಿಶೇಷವೆಂದರೆ, ತಾವು ವೈಯಕ್ತಿಕ ಹಣದಿಂದ ಈ ನೆರವು ನೀಡಿದ್ದರೂ ಶಾಸಕರು ಆ ವಿಷಯವನ್ನು ಎಲ್ಲೂ ಪ್ರಸ್ತಾಪಿಸದೆ, ಕೇವಲ ಲೈಫ್ ಗಾರ್ಡ್ ತಂಡದ ಸೇವೆಯನ್ನು ಮಾತ್ರ ಶ್ಲಾಘಿಸಿದ್ದು ಅವರ ಸರಳತೆ ಹಾಗೂ ನಿಸ್ವಾರ್ಥ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಚಂದ್ರಶೇಖರ್ ಆರ್ ಅವರು, ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರು, ತಾಲೂಕ ಗ್ಯಾರಂಟಿ ಸಮಿತಿಯ ಅಧ್ಯಕ್ಷೆ ಸುಮಾ ಉಗ್ರಾಣಕರ್, ನಗರಯೋಜನೆ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ, ಬಗರ್ ಹುಕುಂ ಸಮಿತಿಯ ಸದಸ್ಯ ಎಸ್.ಕೆ.ಭಾಗವತ್ ಸೇರಿದಂತೆ ಮಾರಿಕಾಂಬ ಲೈಫ್ ಗಾರ್ಡ್ ತಂಡದ ಸದಸ್ಯರು, ಪ್ರಮುಖರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಶಾಸಕರ ಈ ವೈಯಕ್ತಿಕ ನೆರವಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *