ರಾಜ್ಯ ಅರಣ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ- ೪೦ ಆರ್‌ ಎಫ್‌ ಒಗಳ ವರ್ಗಾವಣೆ

0
WhatsApp Image 2026-07-17 at 13.28.58

ರಾಜ್ಯ ಅರಣ್ಯ ಇಲಾಖೆಯಲ್ಲಿ ನಡೆದ ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 40 ವಲಯ ಅರಣ್ಯಾಧಿಕಾರಿಗಳನ್ನು (ಆರ್ಎಫ್ಒ) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ದಾಖಲೆಯ 19 ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ.

ಜಿಲ್ಲೆಯ ಶಿರಸಿ ವಿಭಾಗದ ಪ್ರಮುಖ ವಲಯಗಳ ಆರ್ ಎಫ್ ಓ ಗಳನ್ನು ವರ್ಗಾವಣೆ ಮಾಡಲಾಗಿದೆ. ಶಿರಸಿ ವಲಯದ ಆರ್ ಎಫ್ ಓ ಗಿರೀಶ ನಾಯ್ಕ ಅವರನ್ನು ಹುಲೇಕಲ್ ನೂತನ ಆರ್ಎಫ್ಒ ಆಗಿ ವರ್ಗಾವಣೆ ಮಾಡಲಾಗಿದ್ದರೆ, ಹುಲೇಕಲ್ ಆರ್ ಎಫ್ ಓ ಶಿವಾನಂದ ನಿಂಗಾಣಿ ಅವರನ್ನು ಕ್ಯಾದಗಿಗೆ ವರ್ಗಾವಣೆ ಮಾಡಲಾಗಿದೆ. ಜಾನ್ಮನೆ ವಲಯದ ಉಷಾ ಕಬ್ಬೇರ ಅವರನ್ನು ಸಿದ್ದಾಪುರಕ್ಕೆ ವರ್ಗಾಯಿಸಲಾಗಿದ್ದರೆ, ಬನವಾಸಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಭವ್ಯಾ ನಾಯ್ಕ ಅವರನ್ನು ಶಿರಸಿ ವಲಯಕ್ಕೆ ನಿಯೋಜಿಸಲಾಗಿದೆ. ಉಳಿದಂತೆ ಗೇರುಸೊಪ್ಪ ವಲಯದ ಕಾರ್ತಿಕ ಕಾಂಬಳೆ ಅವರನ್ನು ಬನವಾಸಿಗೆ, ಶಿರಸಿ ಸಾಮಾಜಿಕ ಅರಣ್ಯ ವಲಯದ ಆರ್ ಎಫ್ ಓ ಮಾರುತಿ ನಾಯ್ಕ ಅವರನ್ನು ಮಂಚಿಕೇರಿಗೆ, ಮಂಚಿಕೇರಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ಬೋಜಳ್ಳಿ ಅವರನ್ನು ಇಡಗುಂದಿಗೆ, ಇಡಗುಂದಿಯಲ್ಲಿ ಕೆಲಸ ಮಾಡುತ್ತಿದ್ದ ಎಂ.ಎಚ್. ನಾಯ್ಕ ಅವರನ್ನು ಯಲ್ಲಾಪುರಕ್ಕೆ ವರ್ಗಾಯಿಸಲಾಗಿದೆ.

ಯಲ್ಲಾಪುರದ ಆರ್ ಎಫ್ ಓ ಜಿ.ವಿ. ನರೇಶ್ ಅವರನ್ನು ಬಂಡಿಪುರಕ್ಕೆ ವರ್ಗಾಯಿಸಲಾಗಿದೆ. ಕರಾವಳಿ ಹಾಗೂ ದಾಂಡೇಲಿ ಭಾಗದಲ್ಲೂ ವ್ಯಾಪಕ ಬದಲಾವಣೆಯಾಗಿದ್ದು, ಕತಗಾಲ ವಲಯದ ಆರ್ ಎಫ್ ಓ ಪ್ರೀತಿ ನಾಯ್ಕ ಅವರನ್ನು ಹೊನ್ನಾವರ ಸಾಮಾಜಿಕ ಅರಣ್ಯ ವಲಯ, ರಾಮನಗೂಳಿ ವಲಯದ ಆರ್ ಎಫ್ ಓ ಸುರೇಶ್ ನಾಯಕ ಅವರನ್ನು ಹೀರೇಗುತ್ತಿ, ಅಂಕೋಲಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಮೋದ ನಾಯಕ ಅವರನ್ನು ಹೊನ್ನಾವರಕ್ಕೆ ಹಾಗೂ ಹೊನ್ನಾವರದಲ್ಲಿದ್ದ ಸವಿತಾ ದೇವಾಡಿಗ ಅವರನ್ನ ಕುಮಟಾಗೆ ವರ್ಗಯಿಸಲಾಗಿದೆ.
ಇನ್ನುಳಿದಂತೆ ಕುಮಟಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ ನಾಯಕ ಅವರನ್ನು ದಾಂಡೇಲಿಗೆ ಹಾಗೂ ದಾಂಡೇಲಿಯ ಎನ್.ಎಲ್. ನದಾಫ ಅವರನ್ನು ಹಳಿಯಾಳಕ್ಕೆ, ಹಳಿಯಾಳದ ಬಸವರಾಜ ಪಣಸೋಲಿ ವನ್ಯಜೀವಿ ವಿಭಾಗಕ್ಕೆ ಹಾಗೂ ಪಣಸೋಲಿಯ ರವಿಕಿರಣ ಸಂಪಗಾವಿ ಅವರನ್ನು ಜೊಯಿಡಾ ವಲಯಕ್ಕೆ ವರ್ಗಾವಣೆಗೊಳಿಸಲಾಗಿದೆ.

ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ವಿಳಂಬ ಮಾಡದೇ ತಕ್ಷಣವೇ ನೂತನ ಸ್ಥಳಗಳಲ್ಲಿ ಅಧಿಕಾರ ಸ್ವೀಕರಿಸಿ, ಇ-ಮೇಲ್ ಮೂಲಕ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿಗದಿತ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎಚ್ಚರಿಸಿದೆ.

Leave a Reply

Your email address will not be published. Required fields are marked *