ಶಿರಸಿ: ತಾಲೂಕು ಆಡಳಿತ ಸಂಕೀರ್ಣ ಹಾಗೂ ಇಂಡೋರ್ ಸ್ಟೇಡಿಯಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಶಾಸಕ ಭೀಮಣ್ಣ ನಾಯ್ಕ ಸೂಚನೆ

0
WhatsApp Image 2026-07-16 at 16.03.43

ಶಿರಸಿ:
ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ತಾಲೂಕಾ ಆಡಳಿತ ಸಂಕೀರ್ಣದ ಕಟ್ಟಡ ಹಾಗೂ ಇಂಡೋರ್ ಸ್ಟೇಡಿಯಂ (ಒಳಾಂಗಣ ಕ್ರೀಡಾಂಗಣ) ಕಾಮಗಾರಿಗಳನ್ನು ಅತ್ಯಂತ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಮಾನ್ಯ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ ಅವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಂದು ನಗರದಲ್ಲಿ ಪ್ರಗತಿಯಲ್ಲಿರುವ ಈ ಮಹತ್ವದ ಕಾಮಗಾರಿಗಳ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಪ್ರಸ್ತುತ ನಡೆಯುತ್ತಿರುವ ಕೆಲಸ ಕಾರ್ಯಗಳ ಪ್ರಗತಿಯನ್ನು ಅವಲೋಕಿಸಿದರು.

ಕಟ್ಟಡ ನಿರ್ಮಾಣದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಅತ್ಯಂತ ಗುಣಮಟ್ಟದ ವಸ್ತುಗಳನ್ನು ಬಳಸಬೇಕು ಎಂದು ಗುತ್ತಿಗೆದಾರರಿಗೆ ಶಾಸಕರು ತಿಳಿಸಿದ್ದಾರೆ.

ತಾಲೂಕಾ ಆಡಳಿತ ಸಂಕೀರ್ಣವು ಸಾರ್ವಜನಿಕರಿಗೆ ಒಂದೇ ಸೂರಿನಡಿ ಎಲ್ಲಾ ಆಡಳಿತಾತ್ಮಕ ಸೇವೆಗಳನ್ನು ಒದಗಿಸಲು ನೆರವಾಗುವುದರಿಂದ, ಇದರ ಕೆಲಸಗಳು ವಿಳಂಬವಿಲ್ಲದೆ ಸಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಿರಸಿಯ ಕ್ರೀಡಾ ಆಸಕ್ತರಿಗೆ ಹಾಗೂ ಯುವ ಜನತೆಗೆ ಅನುಕೂಲವಾಗುವಂತೆ ನಿರ್ಮಾಣಗೊಳ್ಳುತ್ತಿರುವ ಇಂಡೋರ್ ಸ್ಟೇಡಿಯಂ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ, ಕ್ರೀಡಾ ಬಳಕೆಗೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

“ಶಿರಸಿ ನಗರದ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗಳು ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಮನ್ವಯತೆಯಿಂದ ಕೆಲಸ ಮಾಡಬೇಕು.”
— ಶ್ರೀ ಭೀಮಣ್ಣ ಟಿ. ನಾಯ್ಕ, ಶಾಸಕರು.

ಈ ಪರಿಶೀಲನಾ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *